Memories

26. ಭಗವಾನ ಶ್ರೀಧರರೊಂದಿಗಿನ ಕೆಲ ಅವಿಸ್ಮರಣೀಯ ಕ್ಷಣಗಳು

(ನಿರೂಪಣೆ : ಶ್ರೀಧರಭಕ್ತ ಡಾ| ಲ. ಶಂ. ಭಾವೆ)

೧. ಶ್ರೀಧರತೀರ್ಥಸ್ತೋತ್ರ
ವರದಹಳ್ಳಿ … ಬೆಳಿಗ್ಗೆ ಸೂರ್ಯೋದಯದ ಕಾಲ
ಸ್ವಾಮಿಗಳು ತೀರ್ಥಕುಟಿಯ ಗುಡ್ಡದ ಮೇಲೆ ತಮ್ಮ ಅನುಸಂಧಾನದಲ್ಲಿ ಮಗ್ನರಾಗಿ ನಡೆಯುತ್ತಿದ್ದರು. ನಾನು ಅವರ ಹಿಂದೆ ಸಾವಕಾಶ ನಡೆಯುತ್ತಿದ್ದೆ. ಸ್ವಾಮಿಗಳ ಲಕ್ಷ ನನ್ನ ಕಡೆಗೆ ಹೇಗೆ ಸೆಳೆಯುವದೆಂಬ, ನನ್ನ ಮನಸ್ಸಿನ ತರಂಗವನ್ನು ಅರಿತರೋ ಏನೋ ಸ್ವಾಮಿಗಳು, ಕೆಳಗಿನ ಕಾವ್ಯಪಂಕ್ತಿ ನನ್ನ ಮನಸ್ಸಿನಲ್ಲಿ ಸ್ಫುರಿಸಿದರು….

‘ಸರ್ವರೋಗಹರಂ ಶುದ್ಧಂ ಜಲಂ ಸ್ಫಟಿಕನಿರ್ಮಲಮ್’ ಮತ್ತು ಅದು ಸ್ವಾಮಿಗಳಿಗೆ ಕೇಳಿಬರುವಷ್ಟರ ಮಟ್ಟಿಗಿನ ಗಟ್ಟಿಸ್ವರದಿಂದ ನನ್ನ ಮುಖದಿಂದ ಹೇಳಲ್ಪಟ್ಟಿತು. ನಾನೇನು ಅಪೇಕ್ಷಿಸಿದ್ದೆನೋ ಅದೇ ಆಯಿತು. ಮಹಾರಾಜರು ತಕ್ಷಣ ಹಿಂದಿರುಗಿ, ಇಷ್ಟು ಸವಿ ನಗೆ ನಕ್ಕರೆಂದರೆ, ಆ ಅಮೃತದ ಸುರಿಮಳೆ ಜನ್ಮಾಂತದ ವರೆಗೂ ಮರೆಯದಂತಿದೆ. ಸ್ವಾಮಿಗಳ ಕೃಪೆಯಿಂದ ಈ ಸ್ತೋತ್ರ ಪೂರ್ಣವಾಗಿ, ಸ್ವಾಮಿಗಳು ಅದನ್ನು ಕೇಳಿದ್ದಷ್ಟೇ ಅಲ್ಲ, ಅದರಲ್ಲಿ, ‘ಸನ್ನಿಧಿ’ ಬದಲು, ‘ಸವಿಧೇ’ ಎಂಬ ಶಬ್ದಯೋಜನೆ ಮಾಡಿ, ತಮ್ಮ ರಾಜಮುದ್ರೆಯನ್ನೇ ಅದಕ್ಕೆ ಒತ್ತಿದರೆನ್ನಬೇಕೇನೋ! ಈ ಸ್ತೋತ್ರ ‘ಶ್ರೀಧರ ಸಂದೇಶ’ದ ಮೊದಲನೆಯ ಅಂಕದಲ್ಲಿ ಪ್ರಕಾಶಿತವೂ ಆಯಿತು.

೨. ಅನುಸಂಧಾನ ಅಂದರೇನು?
ನಾವು ಮಹಾರಾಜರೊಂದಿಗೆ ಪ್ರವಾಸದಲ್ಲಿದ್ದೆವು…ಸ್ವಾಮಿಗಳ ಮೌನವೃತವಿತ್ತು. ಪ್ರಶ್ನೋತ್ತರಗಳು ಮೌನದಲ್ಲಿಯೇ ಇದ್ದವು. ನಾನು ಹಿಂದಿನ ಸಾಲಿನ ಆಸನದಲ್ಲಿದ್ದೆ. ಆಗ ನಾನು, ‘ಅನುಸಂಧಾನ ಅಂದರೇನು?’ ಎಂಬ ಪ್ರಶ್ನೆಯನ್ನು ಸ್ವಾಮಿಗಳಿಗೆ ಕೇಳಿದೆ. ನಂತರ ಗಾಡಿಮಧ್ಯದಲ್ಲಿ ನಿಲ್ಲಿಸಿದಾಗ, ಗಾಡಿಯಿಂದ ಕೆಳಗೆ ಇಳಿದ ಸ್ವಾಮಿಗಳು ತಮ್ಮ ಮಧುರ ‘ಹುಂ’ಕಾರಗಳಿಂದ, ಐದಾರು ಸಂಖ್ಯೆಗಳನ್ನು ಕೈಯಿಂದ ತೋರಿಸಿ, ‘ಹುಂ… ಹುಂ … ಹುಂ …’ ಎನ್ನುತ್ತ, ಕೊನೆಗೆ ಅಖಿಲ ಬ್ರಹ್ಮಾಂಡಕ್ಕೇ ತಮ್ಮ ಕೈಯಿಂದ, ‘ಹುಂ ……..ಹುಂ’ ಘೋಷಿಸುತ್ತಿದ್ದಾರೋ ಎಂಬಂತೆ, ಅತಿ ದೀರ್ಘ ‘ಹುಂ’ಕಾರ ಮಾಡಿದರು. ಅನುಸಂಧಾನದ ಬಗ್ಗೆ ಸ್ವಾಮಿಗಳ ಆ ಕೈ ಚಿಹ್ನೆಗಳ ಉತ್ತರವನ್ನು ಹೀಗೆ ಹೇಳಬಹುದು – ‘ನಮ್ಮನ್ನೂ ಸೇರಿಸಿ, ಈ ಸಕಲ ದೃಶ್ಯಾದೃಶ್ಯ ವಿಶ್ವವು ಒಂದೇ ಒಂದಾಗಿದೆ’, ಎಂಬುದನ್ನು ಸತತವಾಗಿ ನಮ್ಮ ಲಕ್ಷದಲಿಟ್ಟಿರುವದೇ ಅನುಸಂಧಾನ!

೩. ಸಂಧ್ಯಾವಿಧಿಯಲ್ಲಿನ ಪ್ರಾಣಾಯಾಮ
ಒಮ್ಮೆ ಸ್ವಾಮಿಗಳಿಗೆ, ‘ಸಂಧ್ಯಾವಿಧಿಯಲ್ಲಿ ಪ್ರಾಣಾಯಾಮದ ಮಂತ್ರ ಕೊಟ್ಟಿದ್ದಾರೆ; ಆ ಮಂತ್ರದೊಂದಿಗೆ ಪ್ರಾಣಾಯಾಮವನ್ನು ಹೇಗೆ ಮಾಡಬೇಕು?’ ಎಂದು ಕೇಳಿದಾಗ, ಸ್ವಾಮಿಗಳು ಕೆಳಗಿನಂತೆ ಸ್ಪಷ್ಟೀಕರಣ ಮಾಡಿದರು. ‘ಓಂ ಭೂಃ ಓಂ ಭುವಃ ಓಂ ಸುವಃ ಓಂ ಮಹಾ ಓಂ ಜನಃ ಓಂ ತಪಃ ಓಂ ಸತ್ಯಂ’ ಈ ಮಂತ್ರದಿಂದ ನಾಸಿಕದ ಎಡ ಸೊಳ್ಳೆಯಿಂದ ಶ್ವಾಸ ಒಳಗೆ ತೆಗೆದುಕೊಳ್ಳಬೇಕು (ಪೂರಕ), ‘ಓಂ ಭೂರ್ಭುಃಸ್ವಃ ಓಂ ತತ್ಸವಿತುವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋಯೋನಃ ಪ್ರಚೋದಯಾತ್’ ಈ ಮಂತ್ರದಿಂದ ಶ್ವಾಸವನ್ನು ಒಳಗಡೆ ತುಂಬಿಡಬೇಕು (ಅಂತರ ಕುಂಭಕ), ‘ಓಂ ಆಪೋಜ್ಯೋತಿರಸೋಮೃತಂ ಬ್ರಹ್ಮಭೂರ್ಭುವಸ್ವರೋಮ್’ ಈ ಮಂತ್ರದಿಂದ ಬಲ ಸೊಳ್ಳೆಯಿಂದ ಶ್ವಾಸವನ್ನು ಬಿಡಬೇಕು (ರೇಚಕ). ಈ ಮಂತ್ರವನ್ನು ಮನಸ್ಸಿನಲ್ಲೇ ಹೇಳಿ, ಈ ಕ್ರಿಯೆಗಳನ್ನು ಮಾಡಲಿಕ್ಕೆ ಬರುತ್ತದೆ ಮತ್ತು ಈ ರೀತಿ ಮಾಡುವದರಿಂದ ಶಾಸ್ತ್ರಶುದ್ಧ ಪ್ರಾಣಾಯಾಮ ಆಗುತ್ತದೆ.

೪. ‘ಅರೇ! ಅವನ ಭಾವನೆ ನೋಡು!’ ಮಹಾರಾಜರ ಆಶೀರ್ವಾದದಿಂದ ಪಡೆದ ಮಗನನ್ನು ಕರೆದುಕೊಂಡು ಸ್ವಾಮಿಗಳ ದರ್ಶನಕ್ಕೆ ಸಜ್ಜನಗಡದ ಮೇಲೆ ಹೋಗಿದ್ದೆ. ಇಂದು ನನ್ನ ಜೀವನದ ಮೊದಲಿನ ಪಾದಪೂಜೆಯ ಯೋಗ ಕೂಡಿಬಂದಿತ್ತು. ಸ್ವಾಮಿಗಳು, ‘ ಪಾದಪೂಜೆಯನ್ನು ಮೊದಲು ಮಾಡುತ್ತೀಯೋ ಅಥವಾ ಭಿಕ್ಷೆಗ ನಂತರವೋ?’ ಎಂದು ಕೇಳಿದರು. ನಾನು, ‘ಮೊದಲು ಪಾದಪೂಜೆಯನ್ನು ಮಾಡುತ್ತೇನೆ’ ಎಂದೆನು. ಸ್ವಾಮಿಗಳು, ‘ಸರಿ! ಒಳ್ಳೇದು’, ಎಂದು ಹೇಳಿ ಸ್ವಾಮಿಗಳು ಕುಳಿತುಕೊಂಡರು. ಪೂಜೋಪಚಾರದ ನಂತರ ಹೂವು ಏರಿಸುವ ಪ್ರಸಂಗದಲ್ಲಿ ನಾನು, ಗುಲಾಬಿ ಹೂಗಳ ಪಕಳೆಗಳು ಪಾದದಮೇಲೆ ಮತ್ತು ಅದರ ಕಡ್ಡಿಯನ್ನು ಮೇಲಕ್ಕೆ ತಿರುಗಿಸಿ ಏರಿಸುತ್ತಿದ್ದೆ. ತಕ್ಷಣ ಯಾರೋ ಒಬ್ಬರು, ‘ಅಯ್ಯಾ! ವಿರುದ್ಧವಾಗೇಕೆ ಹೂವೇರಿಸುತ್ತಿದ್ದೀರಿ?’ ಎಂದು ಕೇಳಿ, ನನ್ನನ್ನು ಗೊಂದಲಕ್ಕೆ ದೂಡಿದರು. ಅಷ್ಟರಲ್ಲಿ ಸ್ವಾಮಿಗಳ ಮುಖದಿಂದ ಅತ್ಯಂತ ಮಧುರವಾಣಿ ಹೊರಬಿತ್ತು, ‘ಅರೇ! ಅವನ ಭಾವನೆ ನೋಡಿರಿ!’ ಇದೇ ರೀತಿಯ ಒಂದು ಪ್ರಸಂಗ, ಸ್ವಾಮಿಗಳ ವಾಸ್ತವ್ಯ ಮುಂಬಾಯಿಯ ಬ್ರಾಹ್ಮಣ ಸಭೆಯಲ್ಲಿ ಇದ್ದಾಗ ನಡೆಯಿತು. ಸಾಯಂಸ್ನಾನದ ನಂತರ ಸ್ವಾಮಿಗಳು ಮಡಿಯಲ್ಲಿ ಮೇಲೆ ಬರುತ್ತಿದ್ದರು. ದರ್ಶನಕ್ಕೆ ಪ್ರಚಂಡ ಜನದಟ್ಟಣೆಯಿತ್ತು. ಅಷ್ಟರಲ್ಲಿ, ಒಬ್ಬನು ಅಕ್ಷರಶಃ ಓಡೋಡುತ್ತ ಬಂದು, ಸ್ವಾಮಿಗಳ ಕಾಲನ್ನು ಅಪ್ಪಿಕೊಂಡನು. ಆಗ, ಅಯ್ಯಾ! ಕಾಲಲ್ಲಿ ಬೂಟು, ಹಾಗೆಯೇ ಮೈಮೇಲೆ ಆಫೀಸಿನ ಸಾಹೇಬರ ಪೋಷಾಕು. ಇದನ್ನೇನು ಮಾಡಿದಿರಿ? ಸ್ವಾಮಿಗಳು ಮಡಿಯಲ್ಲಿ ಇದ್ದಾರಲ್ಲಾ!’ ಎಂಬ ಕೂಗಾಟ ಕೇಳಿಬಂತು. ಆಗ ಸ್ವಾಮಿಗಳು, ‘ಅರೇ! ಅವನ ಭಾವನೆ ನೋಡಿರಿ! ನನಗೇನು, ಮತ್ತೆ ಸ್ನಾನ ಮಾಡುತ್ತೇನೆ’ ಎಂದು ಹೇಳಿದರು.

೫. ಭಕ್ತರ ಭಾವನೆಗೋಸ್ಕರ ಶರೀರಧರ್ಮಕ್ಕೂ ವೇಳೆಯಿಲ್ಲ
ಹೀಗೆಯೇ ಒಂದು ಜಾಂಬದಲ್ಲಿನ ನೆನಪು. ಮಧ್ಯಾಹ್ನದ ಭಿಕ್ಷೆ ಮುಗಿಸಿ, ಸ್ವಾಮಿಗಳು ದೇವಸ್ಥಾನದ ಹತ್ತಿರದ ಹೂವಿನ ತೋಟದಲ್ಲಿ ಕುಳಿತಿದ್ದರು. ಸ್ವಾಮಿಗಳಿಗೆ ತುಂಬಾ ನೀರಡಿಕೆಯಾದ್ದರಿಂದ ಒಬ್ಬ ಸೇವಕ ಶಿಷ್ಯನು ನೀರು ತರಲಿಕ್ಕೆ ಹೋದನು. ಅಷ್ಟರಲ್ಲಿ ಹೊರಊರಿಂದ ಆಗಷ್ಟೇ ಬಂದಿಳಿದ ಒಬ್ಬ ಭಕ್ತ ಭಗಿನಿಯು ಅಕ್ಷರಶಃ ಓಡುತ್ತಲೇ ಬಂದು, ಸ್ವಾಮಿಗಳ ಕಾಲುಗಳನ್ನು ಹಿಡಿದುಕೊಂಡಳು. ‘ಅಮ್ಮಾ! ಅಮ್ಮಾ! ಸ್ವಾಮಿಗಳಿಗೆ ನೀರು ಕುಡಿಯುವದಿದೆ’ ಎಂದು ಹೇಳುವವರೆಗೆ, ಈ ಪ್ರೀತಿಯ ಸಂಭ್ರಮ ಆಗೇ ಹೋಯಿತು. ಸ್ವಾಮಿಗಳು ಆ ಪ್ರೇಮಜಲವನ್ನು ಕುಡಿದು ಅಕ್ಷರಶಃ ತೃಪ್ತರಾದರು. ಪ್ರತ್ಯಕ್ಷ ನೀರಿಗೆ ಬಂದ ಯೋಗ ದೂರಸರಿಯಿತು. ಕರ್ನಾಟಕ ಪ್ರಾಂತದಲ್ಲಿ ಪ್ರತ್ಯಕ್ಷ ಪಾದಕ್ಕೇ ಅಭಿಷೇಕ ಮಾಡುತ್ತಾರಂತೆ. ಸತತ ನೀರಿನ ಧಾರೆಯಲ್ಲಿ ಯಾವಾಗಲೂ ಇದ್ದದ್ದರಿಂದ ಪಾದ ಮತ್ತು ಬೆರಳುಗಳ ಸಂಧಿಗಳ ಬದಿ ಸೊಲಿದು ಹೋಗಿತ್ತು. ಇಂತಹ ಭಕ್ತಿ ಭಾವನೆಯ ಅತಿರೇಕಗಳನ್ನೂ ಭಕ್ತರ ಮುಗ್ಧ ಭಾವನೆಯಿಂದಾಗಿ ಸಹಿಸಬೇಕಾಗುತ್ತಿತ್ತು. ಯಾವಾಗಲೊಮ್ಮೆ ಒಬ್ಬ ಶಿಷ್ಯನಿಗೆ ‘ಇಂದು ಮೈಕೈಗೆ ಸ್ವಲ್ಪ ಬೆಣ್ಣೆ ಹಚ್ಚಿ ತಿಕ್ಕು; ಉಷ್ಣತೆ ಬಹಳ ಹೆಚ್ಚಾದಂತಿದೆ’ ಎಂದು ಹೇಳಿದರು. ಆ ದಿನ ಕಳೆಯಿತು. ಇನ್ನಾವುದೋ ದಿನ ಒಂದು ಭಕ್ತನು ಸ್ವಾಮಿಗಳು, ‘ಬೇಡ, ಬೇಡ’ ಎಂದು ಹೇಳುತ್ತಿದ್ದರೂ, ಕಿಲೋಗಟ್ಟಲೇ ಬೆಣ್ಣೆ ತಂದು, ಮೈಕೈ ನೋವಾಗುವವರೆಗೆ ತಿಕ್ಕಿ ಸೇವೆ ಮಾಡಿಕೊಂಡನು. ಇದು ನನಗೆ ತಿಳಿದು ಬಂದ ನೆನಪುಗಳು.

೬. ಸ್ವಾಮಿಗಳು ಭಕ್ತಾಧೀನರು.
ಭಕ್ತರ ಮನಸ್ಸನ್ನು ದುಃಖಿತಗೊಳಿಸಬಾರದೆಂದು, ಎಷ್ಟೋ ಸಂದರ್ಭಗಳಲ್ಲಿ ತಾವೇ ಸಂಭಾಳಿಸಿಕೊಳ್ಳುತ್ತಿದ್ದರು. ಮದ್ರಾಸದ ದೊಡ್ಡ ರಾಮದಾಸೀ ಭಕ್ತ ಕೈ. ಪಂತಲು, ಮೊದಲನೆಯ ವೇಳೆ ಸಜ್ಜನಗಡಕ್ಕೆ ಬಂದಾಗ, ಸ್ವಾಮಿಗಳು ತಮ್ಮ ಪೂರ್ವಾಶ್ರಮದ ‘ಶ್ರೀದರ ಬುವಾ’ ಎಂಬ ಹೆಸರಿನಲ್ಲಿ ಸಮರ್ಥ ಸೇವೆಯಲ್ಲಿ ಇದ್ದರು. ಸಮರ್ಥರ ಮಲಗುವ ಕೋಣೆಯ ಮಂಚದ ಮೇಲೆ ಇದ್ದ ಸಮರ್ಥರ ಪಟ ನೋಡಿದ ಪಂತಲುರವರು, ಅದೆಷ್ಟು ಭಾವನಾವಶರಾದರೆಂದರೆ, ಅವರು, ಆ ಪಟಕ್ಕೆ ‘ಸಮರ್ಥಾ!’ ಎನ್ನುತ್ತ, ಗಟ್ಟಿಯಾಗಿ ಅಪ್ಪಿಕೊಂಡೇ ಬಿಟ್ಟರು. ಅದನ್ನು ನೋಡಿ, ಅಲ್ಲಿದ್ದ ಮತ್ತೊಬ್ಬ ಸೇವೇಕರನು, ‘ಶ್ರೀಧರ ಬುವಾ! ಅಯ್ಯಾ! ಇಲ್ಲಿ ಮಡಿಯ ಹೊರತು ಹೋಗಲಾಗದು, ಇದು ನಿಮಗೆ ಗೊತ್ತಿಲ್ಲವೇ?’ ಎಂದು ಕೇಳಿದರು. ಆಗ ಸ್ವಾಮಿಗಳು, ‘ಅಯ್ಯಾ! ಪ್ರೇಮಭಾವದ ಉತ್ಕಟ ಉದ್ರೇಕದಲ್ಲಿ ಅವರಿಗೂ ಎಚ್ಚರವಿರಲಿಲ್ಲ ಮತ್ತು ನಾನೂ ಆ ಪ್ರವಾಹದಲ್ಲಿ ಹರಿದುಹೋದೆ’ ಎಂದು ಹೇಳಿದರು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಅಶ್ವಿನ, ೧೯೦೧ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img