(ನಿರೂಪಣೆ : ರಾಮಚಂದ್ರ ಧೋಂಡೋ ಕುಲಕರ್ಣಿ(ಮನೋಳೀಕರ), ಸಂಕೇಶ್ವರ)
ಇಸವಿ ಸನ ೧೯೪೬ರ ಪ್ಲೇಗನಿಂದಾಗಿ ಸೊಂಟದ ಹತ್ತಿರ ಗಂಟು ಆಗಿತ್ತು ಮತ್ತು ಅದರ ಹುಣ್ಣು ಎಲುವಿನವರೆಗೆ ಮುಟ್ಟಿ, ನನ್ನ ಕಾಲು ಬಲಹೀನವಾಗಿ, ಕೃಷ ಮತ್ತು ನಿಷ್ಕ್ರಿಯವಾಗಿತ್ತು. ಇಸವಿ ಸನ ೧೯೪೬ರಿಂದ ೧೯೪೯ರ ವರೆಗೆ ಮೂರು ವರ್ಷ ಕಾಲ ನಾನು ಹಾಸಿಗೆಯಲ್ಲೇ ಬಿದ್ದಿರುವ ಪರಿಸ್ಥಿತಿಯಾಗಿತ್ತು. ಡಾಕ್ಟರ ಔಷಧ – ಚುಚ್ಚುಮದ್ದು ಬೇಕಷ್ಟು ಆಯಿತು. ಒಂದು ಸಾವಿರಕ್ಕೂ ಹೆಚ್ಚು ಚುಚ್ಚು ಮದ್ದಿನ ಮತ್ತು ಔಷಧದ ಖಾಲಿಯಾದ ಬಾಟಲಿಗಳಿಂದ ಒಂದು ಗೋಣೀ ಚೀಲವೇ ತುಂಬಿಹೋಗಿತ್ತು. ಆ ಅವಸ್ಥೆಯಲ್ಲಿ ಕಾಲು ನೀಡಲಿಕ್ಕೇ ಆಗುತ್ತಿರಲಿಲ್ಲ ಮತ್ತು ಕುಳಿತುಕೊಳ್ಳಲು ಮತ್ತು ನಿಲ್ಲಲು ಅಶಕ್ಯವಾಗಿತ್ತು. ನನ್ನ ಪತ್ನಿ ಬೆಳಗಾವಿಗೆ ಹೋದಾಗ, ಅಲ್ಲಿಯ ಭೋಜಕರ ವಕೀಲರ ಮನೆಗೆ ಶ್ರೀಮತ್ ಭಗವಾನ ಶ್ರೀಧರ ಸ್ವಾಮಿ ಬಂದಿದ್ದರು. ನನ್ನ ದೇಹ ಸ್ಥಿತಿಯ ಬಗ್ಗೆ ಅಲ್ಲಿ ಹೇಳಿಕೊಂಡಾಗ ಸ್ವಾಮಿಗಳ ಸಮ್ಮುಖ ನನ್ನನ್ನು ಕರೆದೊಯ್ದರೆ ನನ್ನ ಕಾಲಿನ ಸಮಸ್ಯೆ ಕಡಿಮೆಯಾಗಬಹುದು ಮತ್ತು ಗುಣವಾಗಬಹುದು ಎಂಬ ಅಭಿಪ್ರಾಯ ತಿಳಿದುಬಂತು. ಆದರೆ ಈ ಯೋಗ ಹೇಗೆ ಕೂಡಿಬರಬೇಕು? ನಮ್ಮ ಆರ್ಥಿಕ ಪರಿಸ್ಥಿತಿಯೂ ಅಷ್ಟಕಷ್ಟೇ ಮತ್ತು ಅದರಲ್ಲೂ ಕಳೆದ ಮೂರು ವರ್ಷಗಳ ಅನಾರೋಗ್ಯ. ಏನೇ ವಿಚಾರ ಮಾಡಿದರೂ ಏನೂ ಮಾರ್ಗ ಕಾಣಿಸುತ್ತಿರಲಿಲ್ಲ. ಆದರೆ ನನ್ನ ಸುದೈವದಿಂದ ನಮ್ಮಲ್ಲಿಯವರೇ ಆದ ಬಾಪೂ ಸಾಹೇಬ ಭಿಡೆಯವರು, ಸ್ವಾಮಿಗಳನ್ನು ಫೆಬ್ರುವರಿ ೧೯೪೯(ಮಾಘ ೧೮೭೦)ರಲ್ಲಿ ತಮ್ಮ ಮನೆಗೆ ಕರೆದುಕೊಂಡು ಬಂದರು. ‘ಸ್ವಾಮಿಗಳು ನಮ್ಮಲ್ಲಿಗೆ ಹೇಗೆ ಬರುತ್ತಾರೆ? ಅವರನ್ನು ಹೇಗೆ ಕರೆಸಬೇಕು?’ ಎಂಬ ಪ್ರಶ್ನೆ ಈಗ ನಮ್ಮ ಮುಂದೆ ಬಂತು. ಅದೇ ವೇಳೆ ನನ್ನ ಹೆಂಡತಿಯ ಬಂಧು ಬಳವಂತರಾವ (ಬಿ. ಎನ್) ಕುಲಕರ್ಣಿಯವರು ಬಂದಿದ್ದರು. ಅವರು ಭಿಡೆಯವರಲ್ಲಿಗೆ ಹೋಗಿ ಸ್ವಾಮಿಗಳ ಚರಣ ಸ್ಪರ್ಷ ನಮ್ಮ ಮನೆಗೆ ಆಗಬೇಕೆಂದು ಸ್ವಾಮಿಗಳಲ್ಲಿ ವಿನಂತಿ ಮಾಡಿಕೊಂಡರು. ಸ್ವಾಮಿಗಳು ‘ನಾನು ಬರುತ್ತೇನೆ’ ಎಂದು ಹೇಳಿದರು. ಸ್ವಾಮಿಗಳು ಬರುತ್ತಾರೆಂದು ತಿಳಿದ ಮೇಲೆ ನಮ್ಮ ಆನಂದ ಸೀಮೆ ಮೀರಿ ಆಕಾಶದೆತ್ತರ ಜಿಗಿಯಿತು.
ಸ್ವಾಮಿಗಳು ನಮ್ಮ ಮನೆಗೆ ಬಂದರು. ನಾನು ಎದ್ದು ಕುಳಿತೆ ಮತ್ತು ನನ್ನ ಆ ಅವಸ್ಥೆಯಲ್ಲಿಯೇ ಪಾದಪೂಜೆ ಮಾಡಿದೆ. ಸ್ವಾಮಿಗಳು ನನ್ನ ಕಾಲಿಗೆ ತೀರ್ಥ ಪ್ರೋಕ್ಷಣೆ ಮಾಡಿದರು ಮತ್ತು ತಾವಾಗಿಯೇ ‘ನಾನು ನಾಳೆ ಮತ್ತೆ ಬರುತ್ತೇನೆ’ ಎಂದು ಹೇಳಿ ಹೋದರು. ಅದರಂತೆ ಮರುದಿನ ಮತ್ತೆ ಬಂದು ನನ್ನ ಆ ಕಾಲಿಗೆ ಬಹಳ ವೇಳೆ ತೀರ್ಥ ಪ್ರೋಕ್ಷಣೆ ಮಾಡಿ ಸ್ವಾಮಿಗಳು, ‘ನೀನು ತಿರುಗಲಿಕ್ಕೆ ಹತ್ತುತ್ತೀಯೆ; ಅಷ್ಟೇ ಏಕೆ? ಸಜ್ಜನಗಢವನ್ನೂ ಹತ್ತಿ ಬರುತ್ತೀಯೆ’ ಎಂದು ಹೇಳಿದರು. ಸ್ವಾಮಿಗಳದ್ದು ಅಮೃತವಾಣಿಯೇ. ಆ ಕ್ಷಣದಿಂದಲೇ ಕಾಲುನೋವು ಕಡಿಮೆಯೆನಿಸಹತ್ತಿತು.
ಮುಂದೆ ಇಸವಿ ಸನ ೧೯೫೨ರಲ್ಲಿ ನಾನು ಮೊದಲನೆಯ ಸಲ ಪರಳಿಯಿಂದ ಕುದುರೆಯ ಮೇಲೆ ಕುಳಿತು ಸಜ್ಜನಗಡಕ್ಕೆ ಹೋದೆ. ಆದರೆ ಎರಡನೆಯ ಸಲ ಮಾತ್ರ ಸಜ್ಜನಗಡವನ್ನು ಕಾಲ್ನಡಿಗೆಯಿಂದಲೇ ಸಾವಕಾಶವಾಗಿ ಹತ್ತಿ ಹೋದೆನು.
ಮೂಕಂ ಕರೋತಿ ವಾಚಾಲಂ|ಪಂಗುಂ ಲಂಘಯತೇ ಗಿರಿಮ್|
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಮ್|
ನಿಜವಾಗಿಯೂ ಈ ವಾಕ್ಯದ ಅಕ್ಷರಶಃ ಶಬ್ದಶಃ ಅನುಭವವಾಯಿತು. ನಮಗೆ ಈ ಅಮೂಲ್ಯ ಕೊಡುಗೆ ಸಿಕ್ಕಿರುವಾಗ ಸ್ವಾಮಿಗಳಿಗೆ ಏನು ಕೊಡಬೇಕು ಎಂದು ಮನಸ್ಸಿನಲ್ಲಿ ಅಸ್ವಸ್ಥತೆ ಮತ್ತು ತಳಮಳ ಪ್ರಾರಂಭವಾಯಿತು. ಅದಕ್ಕುತ್ತರವಾಗಿ ಸ್ವಾಮಿಗಳು, ‘ನಿನಗೆ ಏನು ಸೇವೆ ಮಾಡಬೇಕೆನಿಸುತ್ತದೆಯೋ ಅದನ್ನು ಸಜ್ಜನಗಡಕ್ಕೆ ಬಂದು ಮಾಡುತ್ತಿರು’ ಎಂದು ಅಪ್ಪಣೆ ಮಾಡಿದರು. ಅದರಂತೆ ನನ್ನ ಯಥಾಶಕ್ತಿ ಸೇವೆ ಸ್ವಾಮಿಗಳ ಪ್ರೇಮಾಶೀರ್ವಾದದಿಂದ ಇಂದಿಗೂ ಸಜ್ಜನಗಡದಲ್ಲಿ ನಡೆಯುತ್ತಿದೆ.
|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|
(ಗತಕಾಲದ ‘ಶ್ರೀಧರ ಸಂದೇಶ’ ಸಂಚಿಕೆಗಳ ಪುಟಗಳಿಂದ)
ಕನ್ನಡಾನುವಾದ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ