Memories

31. ನನಗೆ ಗುರುಮಾಯಿ ಹೇಗೆ ಸಿಕ್ಕರು? (ಮೂರನೆಯ ಭಾಗ)

(ನಿರೂಪಣೆ : ಶ್ರೀಧರಭಕ್ತೆ ಶ್ರೀಮತಿ ಮನೋರಮಾಬಾಯಿ ಗಾಡಗೀಳ, ಜಬಲಪುರ)

ಈ ರೀತಿ, ಸುಮಾರು ಎರಡು ತಿಂಗಳು ಸ್ವಾಮಿಗಳೊಂದಿಗೆ ಅನೇಕ ಸ್ಥಳಗಳನ್ನು ನೋಡುವ ಅವಕಾಶ ಸಿಕ್ಕಿತು. ಸತ್ಸಂಗವೂ ಆಯಿತು ಮತ್ತು ಶ್ರೀಚರಣಗಳಲ್ಲಿ ಭಕ್ತಿ ದೃಢವಾಯಿತು. ಮುಂದೆ ಸ್ವಾಮಿಗಳ ಪಾದಪೂಜೆ ಮತ್ತು ಭಿಕ್ಷೆ ಪ್ರಾರಂಭವಾಯಿತು. ಆಗ ಮೊದಲ ಭಿಕ್ಷೆ ನಮ್ಮ ಮನೆಯಲ್ಲಾಯಿತು. ನಮ್ಮ ಮಂದಿರದಲ್ಲಿ ದಿನವೂ ಆರತಿ ಪೂಜೆ ತಬಲೆ, ಪೆಟ್ಟಿಗೆಯ ಸಂಗಡ ಆಗುತ್ತಿತ್ತು. ಅದೇ ವೇಳೆ, ಶ್ರೀದತ್ತಜಯಂತಿಯ ನಿಮಿತ್ತವಾಗಿ, ಗುರುಚರಿತ್ರ ಪಾರಾಯಣ ಸಪ್ತಾಹ ನಡೆದಿತ್ತು. ನನ್ನ ಯಜಮಾನರು ಸ್ವತಃ ಗ್ರಂಥವಾಚನ ಮಾಡಿ ಆರತಿ ಮಾಡುತ್ತಿದ್ದರು ಮತ್ತು ಆ ವೇಳೆ ಸ್ವಾಮಿಗಳು ತಾರಸಿಯ ಮೇಲೆ ನಿಂತು ಆರತಿ ಹಾಡು ಕೇಳುತ್ತಿದ್ದರು. ‘ನಿಮ್ಮ ಆರತಿ ಹಾಡು ಕೇಳಿ, ನನಗೆ ತುಂಬಾ ಸಮಾಧಾನವಾಯಿತು ಮತ್ತು ಆನಂದವೆನಿಸಿತು’, ಎಂದು ಒಮ್ಮೆ ಸ್ವಾಮಿಗಳು ಹೇಳೂ ಹೇಳಿದರು. ‘ನಮ್ಮ ಮೇಲೆ ಅನುಗ್ರಹವಾಗಬೇಕು’, ಎಂದು ನಾವು ಹೇಳಿದಾಗ ಸ್ವಾಮಿಗಳು, ‘ಅನುಗ್ರಹ ಮುಂದೆ ಆಗುತ್ತದೆ. ಸಧ್ಯ ನೀವು ಯಾವ ನಾಮೋಪಚಾರ ಕೇಳಿದ್ದೀರೋ, ಅದರ ಜಪವನ್ನೇ ನಡೆಸುತ್ತಿರಿ. ಬೇಗನೆ ಸಮಯ ಬರುತ್ತದೆ’, ಎಂದು ಹೇಳಿದರು. ಮುಂದೂ ಸ್ವಾಮಿಗಳ ವಾಸ್ತವ್ಯ ಕಾಶಿಯಲ್ಲಿರುವ ವರೆಗೆ, ಸ್ವಾಮಿಗಳ ದರ್ಶನ, ಸಹವಾಸ ಆಗುತ್ತಿತ್ತು. ಆದರೆ, ಸ್ವಾಮಿಗಳು ಕಾಶಿಯಿಂದ ಹೊರಟು ಹೋದ ಮೇಲೆ, ಅವರ ದರ್ಶನ ಮತ್ತೆಂದು ಆಗುವದೋ ಮತ್ತು ಅನುಗ್ರಹ ಇನ್ನೆಂದು ಸಿಗುವದೋ, ಎಂದು ಮನಸ್ಸು ತಳಮಳಿಸುತ್ತಿತ್ತು.

ನಂತರ ಕೆಲ ದಿನಗಳಲ್ಲಿ ಪತಿದೇವರ ಪ್ರಕೃತಿ ಹದಗೆಡಹತ್ತಿತು ಮತ್ತು ತಳಮಳವೂ ಹೆಚ್ಚಾಯಿತು. ಒಂದು ದಿನವಂತೂ ಇಷ್ಟು ಪ್ರಕೃತಿ ಹದಗೆಟ್ಟಿತೆಂದರೆ, ಅವರು ಇದರಿಂದ ಪಾರಾಗುವ ಶಕ್ಯತೆ ಇಲ್ಲವೆಂದೇ ಕಾಣುತ್ತಿತ್ತು. ಒಂದು ರಾತ್ರಿಯಂತೂ ಕೈಕಾಲು ತಣ್ಣಗಾಯಿತು, ಶಬ್ದ ಹೊರಡುತ್ತಿರಲಿಲ್ಲ, ಕಣ್ಣುಬೇಳೆ ಕೂಡ ಮೇಲೇರಿದಂತೆ ಕಾಣುತ್ತಿತ್ತು. ನಾನು ತಲೆದಿಂಬ ಹತ್ತಿರವೇ ಕುಳಿತಿದ್ದೆ ಮತ್ತು ನಮ್ಮಲ್ಲಿ ಉಳಿದುಕೊಂಡಿದ್ದ ಗ್ರಹಸ್ಥನು ಕಾಲ ಬಳಿಗೆ ಕುಳಿತಿದ್ದನು. ಈಗೇನು ಮಾಡುವದು? ಈ ಅಪರಾತ್ರಿ ಯಾರನ್ನು ಕರೆಯುವದು? ತುಂಬಾ ಬಿಕ್ಕಟ್ಟಿನ ಪರಿಸ್ಥಿತಿ. ನಾನೂ ಮನಸ್ಸಿನಲ್ಲಿ ಭಯಭೀತನಾಗಿದ್ದೆ. ಕಣ್ಣು ಮುಚ್ಚಿ ಸ್ವಾಮಿಗಳ ಧ್ಯಾನ ಮಾಡಿದೆ. ರಾತ್ರಿ ಸುಮಾರು ಒಂದು ಗಂಟೆಗೆ ನಾನು ಕಣ್ಣು ತೆರೆದೆ ಮತ್ತು ಅವರ ಕಾಲಿನ ಬದಿಯ ಕೋಣೆಯಿಂದ ಹೊರಹೋಗುವ ಬಾಗಿಲಕಡೆ ನನ್ನ ಲಕ್ಷ ಹೋಗಲು, ಅಲ್ಲಿ ಕಡುಗಪ್ಪು ಮೈಬಣ್ಣ, ದಷ್ಟಪುಷ್ಟ ಎತ್ತರಾಕಾರ, ಕಡುಗೆಂಪು ಕಣ್ಣುಗಳ ಒಬ್ಬ ಭಯಂಕರ ಮನುಷ್ಯ ನಿಂತುಕೊಂಡಿದ್ದನು ಮತ್ತು ಅವನ ಕೈಯಲ್ಲಿ ಅತಿಸೂಕ್ಷ್ಮ ದಾರದಂತೆ ಏನೋ ಇದ್ದು, ಅವನು ಅದನ್ನು ಎಸೆಯುತ್ತಿದ್ದಂತೆ ನನಗೆ ತೋರಿತು. ಆ ದೃಶ್ಯ ನೋಡುತ್ತಲೇ, ನಾನು ಭೀತಿಯಿಂದ ನನ್ನ ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡೆ. ಬಾಯಿಂದ ಶಬ್ದ ಹೊರಬರುತ್ತಿರಲಿಲ್ಲ. ಆದರೂ ಬಹಳ ಪ್ರಯತ್ನ ಮಾಡಿ, ‘ಗುರುದೇವಾ, ಗುರುದೇವಾ’ ಎಂದು ಕೂಗಿದೆ. ಆಗ ಅದೇನು ನೋಡಿದೆ? ಪೂಜಾಗೃಹದ ಬಾಗಿಲಲ್ಲಿ ಪ್ರತ್ಯಕ್ಷ ಗುರುದೇವ ನಿಂತುಕೊಂಡಿದ್ದರು ಮತ್ತು ಅವರಿಂದ ಮಹಾವಾಕ್ಯದ ಉಚ್ಛಾರ ನಡೆದಿತ್ತು. ಕೈಯಲ್ಲಿ ಕಮಂಡಲು, ಕಾಲುಗಳಲ್ಲಿ ಪಾದುಕೆ, ಹಣೆಯ ಮೇಲೆ ಭಸ್ಮ, ಕುತ್ತಿಗೆಯಲ್ಲಿ ತುಳಸಿ ಮತ್ತು ರುದ್ರಾಕ್ಷದ ಮಾಲೆ ಶೋಭಿಸುತ್ತಿತ್ತು. ಸ್ವಾಮಿಗಳು ಕಮಂಡಲದಲ್ಲಿನ ಗಂಗಾಜಲವನ್ನು ನನ್ನ ಯಜಮಾನರ ಮೈಮೇಲೆ ಪ್ರೋಕ್ಷಣ ಮಾಡಿದರು ಮತ್ತು ನನಗೆ ಹೇಳಿದರು, ‘ಮಗಾ! ಹೆದರಬೇಡ! ನೀನು ನನಗೆ ಕರೆದೆಯಲ್ಲಾ! ಮತ್ತೆ ನೋಡು ನಾನು ಬಂದೇಬಿಟ್ಟೆ. ತೀರ್ಥಪ್ರಸಾದ ತೆಗೆದುಕೋ.’ ನಾನು ಕೈಮುಂದೆ ಮಾಡಿ ನೋಡಿದರೆ, ಅಲ್ಲಿ ಯಾರೂ ಇಲ್ಲ. ಎಲ್ಲೆಡೆ ಶಾಂತತೆ ತುಂಬಿತ್ತು. ಅಷ್ಟರಲ್ಲಿ, ನನ್ನ ಯಜಮಾನರೆಂದರು, ‘ನನಗೆ ನೀರು ಕೊಡು ಮತ್ತು ಮಾತಾಜಿಯನ್ನು ಕರೆಸು. ನನಗೆ ಸ್ವಾಮಿಗಳ ಪಾದ ಪೂಜೆ ಮಾಡಬೇಕು.’ ನಾನು ನನ್ನ ಯಜಮಾನರಿಗೆ ನೀರು ಕೊಟ್ಟೆ ಮತ್ತು ಹೇಳಿದೆ, ‘ಈಗ ರಾತ್ರಿ ಎರಡು ಗಂಟೆಯಾಗಿದೆ. ಬೆಳಿಗ್ಗೆ ಬೇಗನೆದ್ದು ಮಾತಾಜಿಯವರನ್ನು ಕರೆದುಕೊಂಡು ಬರುತ್ತೇನೆ. ತದನಂತರ ನನ್ನ ಯಜಮಾನರಿಗೆ ಅದಾಗಲೇ ನಿದ್ರೆ ಬಂತು.

ಮರುದಿನ ಬೆಳಿಗ್ಗೆ ಚಮತ್ಕಾರವೆಂದರೆ, ನಿತ್ಯ ನಿಯಮದಂತೆ ಸ್ನಾನ ಮಾಡಿ ಮಾತಾಜಿಯವರು ಸೀದಾ ಭೋಸಲೆ ಮಂದಿರದಲ್ಲಿ ನಮ್ಮ ಬಳಿಗೆ ಬಂದು, “ಅತ್ತಿಗೆ, ನನಗೆ ರಾತ್ರಿ ಎರಡು ಮೂರರ ಸುಮಾರಿಗೆ ಶ್ರೀಸದ್ಗುರುದೇವರು ಬಂದು ಹೇಳಿದರು, ‘ಭೋಸಲೆ ಮಂದಿರಕ್ಕೆ ಹೋಗು ಮತ್ತು ತೀರ್ಥ ಕೊಟ್ಟು ಬಾ’, ಎಂದು. ಅದರಂತೆ ನಾನು ತೀರ್ಥ ಕೊಡಲು ಬಂದಿದ್ದೇನೆ. ನಿಮಗೆ ದರ್ಶನವಾಗಿತ್ತೇ?’ ಎಂದು ಕೇಳಿದರು.
ಬೆಳಿಗ್ಗೆ ನನ್ನ ಯಜಮಾನರು, ಗುರುದೇವರ ಪಾದ್ಯಪೂಜೆ ಮಾಡಿದರು ಮತ್ತು ತಿಜೋರಿಯಲ್ಲಿದ್ದ ಎಲ್ಲ ಹಣವನ್ನು ಕೊಡಲು ಹೇಳಿದರು. ಸರಕಾರಿ ಹಣ ಹೇಗೆ ಕೊಡುವದು, ಎಂದು ನಾನು ವಿಚಾರದಲ್ಲಿ ಬಿದ್ದೆ. ಆದರೆ ಮಾತಾಜಿ ಎಂದರು, ‘ಏನೂ ಸಂಕೋಚವಿಟ್ಟುಕೊಳ್ಳದೇ ಅವರ ಮನಸ್ಸಿನಂತೆ ಮಾಡಿ.’ ನಾನು ಹಾಗೇ ಮಾಡಿದೆ. ಶ್ರೀಗುರುದೇವರು ಐದು ರೂಪಾಯಿ ಇಟ್ಟು, ಉಳಿದೆಲ್ಲವನ್ನೂ ಪ್ರಸಾದವೆಂದು ನನಗೆ ತಿರುಗಿ ಕೊಟ್ಟರು. ಸಾಯಂಕಾಲದಲ್ಲಿ, ಐದು ರೂಪಾಯಿಗಳ ಪ್ರಸಾದ ಹಂಚಿದೆವು ಮತ್ತು ನಂತರ ನನ್ನ ಯಜಮಾನರ ಪ್ರಕೃತಿ ಸಂಪೂರ್ಣ ಗುಣವಾಯಿತು. ಡಾಕ್ಟರರ ಸಲಹೆಯಂತೆ, ಒಂದೆರಡು ವರ್ಷಗಳಲ್ಲೇ ನೌಕರಿಗೆ ರಾಜೀನಾಮೆ ಕೊಟ್ಟು, ನಾವು ಜಬಲಪುರಕ್ಕೆ ಬಂದೆವು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಕಾರ್ತೀಕ, ೧೯೦೧, ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img