Memories

36. ಯವನ ಪೋಲೀಸ ಅಧಿಕಾರಿ ಶರಣು ಬಂದನು

(ನಿರೂಪಣೆ : ಶ್ರೀಧರಭಕ್ತೆ ಕು. ಲೀಲಾತಾಯಿ ಪೂಜಾರಿ)

ಕರ್ನಾಟಕದಲ್ಲಿನ ಸಾಗರ ಪಟ್ಟಣದ ರಾತ್ರಿಯ ಏಳೆಂಟು ಗಂಟೆಯ ಹೊತ್ತಿಗೆ, ಅಬ್ದುಲ ಶೇಖ ಎಂಬ ಸಿ. ಆಯ್. ಡಿಯ ಒಬ್ಬ ಅಧಿಕಾರಿ ತನ್ನ ಕಾರ್ಯಾಲಯದಲ್ಲಿ, ಬೆನ್ನ ಹಿಂದೆ ಕೈಕಟ್ಟಿ, ಜೋರಾಗಿ ಅತ್ತಿಂದಿತ್ತ, ಇತ್ತಿಂದತ್ತ ತಿರುಗಿತ್ತಿದ್ದನು. ಮಧ್ಯೆ ಮಧ್ಯೆ ಹಲ್ಲಿನಿಂದ ತನ್ನ ತುಟಿ ಕಚ್ಚುತ್ತಾ, ಪೋಲೀಸರ ಬೈಗಳ ಶಬ್ದಗಳೂ ಆತನ ಬಾಯಿಂದ ಹೊರಬೀಳುತ್ತಿತ್ತು. ಆತನು, ತನ್ಮಧ್ಯೆ ತನ್ನ ಶತಪಥ ಹಟಾತ್ ನಿಲ್ಲಿಸಿ, ೪-೫-೯, ಸಂಖ್ಯೆ ತಿರುಗಿಸಿ, ಫೋನು ಮಾಡಿ, ‘ ಹಲೋ! ಯಾರು ಮಾತನಾಡುತ್ತಿರುವದು? ನೋಡಿ, ನಾರಾಯಣ! ಅಲ್ಲಿ ದೇಸಾಯಿ ಸಾಹೇಬರು ಇದ್ದಾರೆಯೇ?’, ಎಂದು ಕೇಳಿದನು. ಅದಕ್ಕೆ, ‘ಹೌದು ಇದ್ದಾರೆ, ಹೊರಗೆ ಹೂತೋಟದಲ್ಲಿದ್ದಾರೆ’, ಎಂದು ಎದುರಿನಿಂದ ಬಂದ ಉತ್ತರಕ್ಕೆ, ‘ನಾನು ಫೋನು ಹಿಡಿದಿರುತ್ತೇನೆ, ಅವರೊಡನೆ ಮಾತನಾಡಬೇಕಿತ್ತು’, ಎಂದು ಆ ಸಿ.ಆಯ್. ಡಿ ನಿರೀಕ್ಷಕ ಹೇಳಿದನು. ನಂತರ ದೇಸಾಯಿಯವರಿಗೆ, ‘ನಾನು ಶೇಖ ಮಾತನಾಡುತ್ತಿದ್ದೇನೆ. ವಿಶೇಷವೇನಿಲ್ಲ. ಸ್ವಲ್ಪ ವೇಳೆ ಮಾಡಿಕೊಂಡು, ನಮ್ಮ ಬಳಿಗೆ ಬಂದರೆ ಸ್ವಲ್ಪ ಹೊತ್ತು ಹೀಗೇ ಮಾತನಾಡುತ್ತಾ ಸಮಯ ಕಳೆಯಬಹುದು’ ಎಂದು ಹೇಳಿ ದೇಸಾಯಿಯವರೊಂದಿಗೆ ಸಂಭಾಷಣೆ ಮುಗಿಸಿದನು.
ಈ ಸಂಭಾಷಣೆಗೆ ಹಿನ್ನೆಲೆಯಾಗಿ ಕೆಲವು ಘಟನಾವಳಿಗಳು ಇವೆ.

ಆಗ ಕೇಂದ್ರದಲ್ಲಿ ಆಡಳಿತದಲ್ಲಿದ್ದ ಸರಕಾರದ ದುರಾಡಳಿತ ಮತ್ತು ಬೇಜವಾಬುದಾರಿಯಿಂದಾಗಿ ಆಹಾರ ಧಾನ್ಯಗಳ ತೀವ್ರ ಕೊರತೆಯುಂಟಾಗಿ, ಪಡಿತರ ವ್ಯವಸ್ಥೆಯ ಕಾಯದೆ-ಕಟ್ಟಳೆಗಳನ್ನು ಜಾರಿಗೊಳಿಸಿ, ಎರಡು ಹೊತ್ತಿನ ಊಟಕ್ಕೂ ಸಮಸ್ಯೆಯಾಗಿತ್ತು. ಸಾಮಾನ್ಯ ಜನರ ದಿನನಿತ್ಯದ ಜೀವನವು ದುಸ್ತರವಾಗಿತ್ತು. ಸರಕಾರದ ಕೆಟ್ಟ ಕಟ್ಟಳೆಗಳ ಕಟ್ಟು ನಿಟ್ಟಿನ ಅನುಷ್ಠಾನಕ್ಕೆ ದುಷ್ಟ ಅಧಿಕಾರಿಗಳ ವಿಶೇಷ ಪಡೆಗಳೂ ಇದ್ದವು. ಅಂತಹ ಗುಂಪಿನ ಒಬ್ಬ ಅಧಿಕಾರಿಯು ಈ ಶೇಖನಾಗಿದ್ದನು. ಆತನು ಸಮಯಸಾಧಕನೂ ಆಗಿದ್ದನು. ತನ್ನ ಮುಂದಿನ ಭಡತಿಗೆ ತಾನು ತನ್ನ ಕಾರ್ಯಕ್ಷೇತ್ರದಲ್ಲಿ ಏನೋ ದೊಡ್ಡ ಕಾರ್ಯ ಸಾಧಿಸಿದಂತೆ ತೋರಿಸುವ ಹುನ್ನಾರಿನಲ್ಲಿ ಇದ್ದನು. ಅದರ ಅವಕಾಶದ ದಾರಿಕಾಯುತ್ತಿದ್ದನು. ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳು ಅಸಂಖ್ಯ ಭಕ್ತವೃಂದವನ್ನು ಹೊಂದಿರುವ ಬಗ್ಗೆ ಮತ್ತು ಅವರ ಅನ್ನದಾನದ ಕಾರ್ಯಕ್ರಮಗಳ ಬಗ್ಗೆ ಆತನು ಕೇಳಿ ತಿಳಿದಿದ್ದನು. ಅದು ಪಡಿತರ ಕಾಯದೆಯ ಉಲ್ಲಂಘನೆಯೆಂದು ತೋರಿಸಿ, ಸ್ವಾಮಿಗಳನ್ನೇ ಬಂಧಿಸಿ, ತಾನೊಂದು ಘನ ಕಾರ್ಯಮಾಡಿದೆನೆಂದು ತೋರಿಸಿಕೊಳ್ಳುವದು ಆತನ ಕುಬುದ್ಧಿಯ ವಿಚಾರವಾಗಿತ್ತು. ಮೊದಲೇ ಸನಾತ ಧರ್ಮ, ಹಿಂದೂ ಆಚಾರ-ವಿಚಾರಗಳಲ್ಲಿ ನಂಬುಗೆಯಿಲ್ಲದ ಯವನ ಬುದ್ಧಿ, ಮೇಲಾಗಿ, ಆಗಿನ ನಿಧರ್ಮಿ ರಾಜಕೀಯ ವಾತಾವರಣವೂ ಅದಕ್ಕೆ ಅನುಕೂಲವಾಗಿಯೇ ಇತ್ತು. ಹಿಂದು ಸಾಧು – ಸಂತರ ಅವಹೇಳನ, ಪರಧರ್ಮೀಯರ ತುಷ್ಟೀಕರಣವು ಆಗಿನ ಸ್ವಾತಂತ್ರೋತ್ತರ ಅಧಿಕಾರಕ್ಕೆ ಬಂದ ಸರ್ವೋಚ್ಚ ಧುರೀಣರಿಂದ ಕೆಳಗಿನವರೆಗೂ ಸಾರ್ವತ್ರಿಕವಾಗಿ ಹರಡಿತ್ತು. ಅದೊಂದು ಸರ್ವೇ
ಸಾಮಾನ್ಯ ಮಾತಾಗಿತ್ತು. ಆದರೂ ಕೆಲ ಸಾತ್ವಿಕ ಅಧಿಕಾರಿಗಳೂ ಇದ್ದರು. ಸ್ವಾಮಿಗಳ ನಿಜ ರೂಪವನ್ನು ಅರಿತ ಭೋಸಲೆ ಎಂಬ ಅಧಿಕಾರಿಯು ಸ್ವಾಮಿಗಳ ಮೇಲಿನ ಆ ನೀಚ ವಿಚಾರವನ್ನು ಒಪ್ಪದೇ, ‘ಸ್ವಾಮಿ! ಅಲ್ಲಿ ನಮ್ಮ ಅಧಿಕಾರ ನಡೆಯುವದಿಲ್ಲ’, ಎಂದು ಸ್ಪಷ್ಟವಾಗಿ ಹೇಳಿದ್ದನು. ಆದರೆ ಶೇಖನ ವಿಚಾರ ಸರಣಿ ಅದಕ್ಕೆ ವಿರುದ್ಧವಾಗಿತ್ತು. ಆತನಿಗೆ ಆತನ ದುಷ್ಟಬುದ್ಧಿಗನುಸಾರವಾಗಿ ಯಾರು ಏನೇ ಹೇಳಿದರೂ ಸ್ವಾಮಿಗಳ ಮೇಲೆ ಭಕ್ತಿ, ಶ್ರದ್ಧೆ, ನಂಬಿಕೆ ಇರಲಿಲ್ಲ. ತಾನು ಸ್ವಾಮಿಗಳನ್ನು ಹೇಗಾದರೂ ಮಾಡಿ ಬಂಧಿಸಿದರೆ, ತನ್ನ ಮುಂದಿನ ಪದೋನ್ನತಿ ಸುನಿಶ್ಚಿತವೆಂದು ಅವನಿಗೆ ಅನಿಸುತ್ತಿತ್ತು. ಅಷ್ಟೇ ಅಲ್ಲದೇ, ತಾನು ಹಾಗೆ ಮಾಡಿ, ಸ್ವಾಮಿಗಳ ಭಕ್ತವೃಂದಕ್ಕೆ ಸರಿಯಾದ ಪಾಠ ಕಲಿಸಿ, ರಾಕ್ಷಸೀ ಆನಂದ ಹೊಂದುವ ಅಪೇಕ್ಷೆಯೂ ಕೂಡಿತ್ತು. ಇರಲಿ.

ಆ ಸಿ.ಆಯ್.ಡಿ. ನಿರೀಕ್ಷಕ ಶೇಖನ ಆಮಂತ್ರಣದಂತೆ, ಫೌಜದಾರ ದೇಸಾಯಿಯವರು ಬಂದು, ಬಾಗಿಲಿನ ಕರೆಗಂಟೆ ಒತ್ತಿದರು. ‘ಹಾ, ಬಂದೆ’ ಎನ್ನುತ್ತ, ಮುಂದೆ ಬಂದು ಆ ಶೇಖನು ಬಾಗಿಲು ತೆರೆದು, ‘ಬನ್ನಿ, ಬನ್ನಿ ದೇಸಾಯಿ! ಹಾ, ಮತ್ತೇನು ನಡೆದಿದೆ, ನಿಮ್ಮ ವಿಭಾಗದಲ್ಲಿ?’ ಎಂದು ಕೇಳಿದನು. ಅದಕ್ಕೆ, ‘ಎಲ್ಲಾ ಸರಿಯಾಗಿಯೇ ನಡೆದಿದೆ’, ಎನ್ನುತ್ತ ದೇಸಾಯಿಯವರು ಖುರ್ಚಿಯ ಮೇಲೆ ಕುಳಿತರು. ಆಗ ಆ ಸಿ. ಅಯ್. ಡಿ. ನಿರೀಕ್ಷಕ ಶೇಖನು, ‘ದೇಸಾಯಿ! ನಾನು ನಿಮ್ಮನ್ನು ಕರೆದದ್ದೇಕೆಂದರೆ, ಇಲ್ಲಿಂದ ಆರು ಮೈಲು ದೂರದಲ್ಲಿ ವರದಹಳ್ಳಿ ಎಂಬ ಹಳ್ಳಿಯಿದೆ. ಅಲ್ಲಿ ಶ್ರೀಧರ ಸ್ವಾಮಿ ಎಂಬ ಯಾರೋ ಒಬ್ಬ ಯೋಗಿ ಸಾಧು ಮಹಾತ್ಮಾ ಇದ್ದಾನಂತೆ ಮತ್ತು ಅಲ್ಲಿ ಪ್ರತಿದಿನ ನಾಲ್ಕೈದು ಸಾವಿರ ಜನ ಊಟ ಮಾಡುತ್ತಾರಂತೆ. ಏಳೆಂಟು ದಿನಗಳಿಂದ ನಾನಿದನ್ನು ಕೇಳುತ್ತಿದ್ದೇನೆ. ಈಗ ಆಹಾರದ ಪಡಿತರದ ಕಾಲ. ಆದರೆ ಇಲ್ಲಿಯ ಊಟದ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪತ್ರವಿಲ್ಲವೆನ್ನುತ್ತಾರೆ. ಈ ವಿಷಯ ನಿಜವೇನು? ನೀವು ಬಹಳ ದಿನಗಳಿಂದ ಇಲ್ಲಿ ಫೌಜದಾರ ಇದ್ದೀರಿ. ಹಾಗಿದ್ದಾಗ ನೀವು ನಿಮ್ಮ ಮೇಲಿನ ಅಧಿಕಾರಿಗಳಿಗೆ ಏನೂ ತಿಳಿಸಿಲ್ಲವೇನು? ಅಥವಾ ನಿಮಗೆ ಇದೇನೂ ಗೊತ್ತೇ ಇಲ್ಲವೇ?’, ಎಂದು ದೇಸಾಯಿಯವರನ್ನು ಪ್ರಶ್ನಿಸಿದನು. ಶೇಖನ ಆ ಪ್ರಶ್ನೆಯ ಹಿಂದೆ ಪ್ರೇಮವಿದೆಯೋ, ದ್ವೇಷವಿದೆಯೋ ಅಥವಾ ಆ ಪ್ರಶ್ನೆಯ ಹಿಂದಿನ ಹೇತುವೇನೆಂಬುದರ ಬಗ್ಗೆ ದೇಸಾಯಿಯವರ ಲಕ್ಷ ಹೋಗಲೇ ಇಲ್ಲ. ಶ್ರೀಧರ ಸ್ವಾಮಿಗಳ ಹೆಸರು ಎತ್ತಿದೊಡನೆ ಅವರು ಅವರ ಮನಸ್ಸಿನಿಂದ ವರದಹಳ್ಳಿ ತಲುಪಿದರು ಮತ್ತು ಅಲ್ಲಿಯ ಆ ಪರಿಸರ ಅವರ ಕಣ್ಣ ಮುಂದೆ ಕಾಣಹತ್ತಿತು.
ಅಲ್ಲಿಯ ಆ ಹಸಿರು ವನಸಂಪತ್ತು… ಎಲ್ಲೆಡೆ ಬಾಳೆ ತೆಂಗು, ಅಡಿಕೆಯ ತೋಟ … ವರದಗಿರಿಯ ಬುಡದ ಶ್ರೀದುರ್ಗಾಂಬೆಯ ಭವ್ಯ ಮಂದಿರ … ಅದರ ಹತ್ತಿರದ ದೊಡ್ಡ ಕೆರೆ … ತುಂಬಿತುಳುಕುವ ಸ್ವಚ್ಛ ಕೆರೆಯ ನೀರಿನ ಅಲೆ … ಸ್ವಾಮಿಗಳ ಮಧ್ಯ ಕುಟಿ … ಶ್ರೀಧರ ತೀರ್ಥ … ಶಿಖರ ಕುಟಿ. ಇವೆಲ್ಲ ಭವ್ಯ ದಿವ್ಯ ದೃಶ್ಯ ದೇಸಾಯಿಯವರ ಮನಃಪಟಲದ ಮೇಲೆ ಕುಣಿಯಹತ್ತಿತು. ಶ್ರೀ ಗುರುಮಾತೆಯ ಆ ಪ್ರೇಮಪೂರಿತ ಮೂರ್ತಿಯೂ ಅವರ ಕಣ್ಮುಂದೆ ಬಂತು. ಅಷ್ಟರಲ್ಲಿ, ‘ನೀವು ವರದಹಳ್ಳಿ ನೋಡಿದ್ದೀರೇನು?’ ಎಂಬ ಆ ನಿರೀಕ್ಷಕನ ಪ್ರಶ್ನೆಯಿಂದ ದೇಸಾಯಿಯವರು ಮೈಮರೆವಿನಿಂದ ಮರುಕಳಿಸಿ ಬಂದು, ‘ಹೌದು ನೋಡಿದ್ದೇನೆ; ಅಲ್ಲಿ ಸಾಕ್ಷಾತ್ ದೇವರೇ ವಿಜ್ರಂಭಿಸುತ್ತಿದ್ದಾನೆ. ಅಲ್ಲಿ ಎಲ್ಲಿಯ ಪಡಿತರ? ಮತ್ತೆಲ್ಲಿಯ ಅನುಮತಿ ಪತ್ರ!’, ಎಂದು ಹೇಳದರು. ಆ ಧೂರ್ತ ಶೇಖನು, ‘ನನ್ನ ಮನಸ್ಸಿನಲ್ಲೂ ಅಲ್ಲೊಮ್ಮೆ ಹೋಗಬೇಕೆಂದಿದೆ’, ಎಂದು ಹೇಳಿದನು ಮತ್ತು ತನ್ನ ಮಾತು ಮುಂದುವರಿಸುತ್ತ, ‘ನೀವೆಲ್ಲ ಇಷ್ಟು ವರ್ಣನೆ ಮಾಡುತ್ತಿದ್ದೀರಿ ಎಂದಮೇಲೆ, ಒಮ್ಮೆಯಾದರೂ ಆ ವ್ಯಕ್ತಿಯನ್ನು ನೋಡಬೇಕು, ಎಂದು ಮನಸ್ಸಿನಲ್ಲಿ ಬಂದಿದೆ’, ಎಂದು ತನ್ನ ಕಪಟವನ್ನು ಮುಚ್ಚುತ್ತಾ ಹೇಳಿದನು. ಆಗ ಆತನ ಕಪಟವರಿಯದ, ಶುದ್ಧ ಹೃದಯದ, ತೆರೆದ ಮನಸ್ಸಿನ, ದೇಸಾಯಿಯವರು, ‘ಯಾವಾಗಾದರೂ ಏಕೆ? ನಾಳೆ ಗುರುವಾರ. ನಾಳೆ ಬೆಳಿಗ್ಗೆಯೇ ಅಲ್ಲಿಗೆ ಹೋಗೋಣ. ಒಂದೇ ಒಂದು ಅಡಚಣಿಯೇನೆಂದರೆ, ಧೋತರ ಅಥವಾ ಪಂಚೆ ತೊಟ್ಟುಕೊಳ್ಳಬೇಕಾಗುತ್ತದೆ. ನಮ್ಮ ಸ್ವಾಮಿಗಳ ಮಡಿ ತುಂಬಾ ಕಟ್ಟುನಿಟ್ಟಾಗಿದೆ. ಸ್ವಾಮಿಗಳ ಎರಡು-ಮೂರು ಮುಸಲ್ಮಾನ ಶಿಷ್ಯರೂ ಇದ್ದಾರೆ. ನಮ್ಮ ಅದೃಷ್ಟ ಚೆನ್ನಾಗಿದೆ. ನಾಳೆಯೇ ಹೋಗೋಣ’, ಎಂದು ಹೇಳಿದರು. ಆಗ, ‘ಪಂಚೆಯಾದರೇನು, ಧೋತರವಾದರೇನು? ಲಂಗೋಟಿಯೆಂದರೂ ನಾವು ತಯಾರಿದ್ದೇವೆ’, ಎಂದು ಆ ನಿರೀಕ್ಷಕ ಶೇಖನು ಹೇಳಲು, ನಗುವಿನೊಂದಿಗೆ ಆ ದಿನದ ಭೇಟಿ ಮುಕ್ತಾಯವಾಯಿತು.
ಮರುದಿನ, ಆ ನಿರೀಕ್ಷಕನು ತನ್ನ ಎರಡು ಮುಸಲ್ಮಾನ ಪೇದೆಗಳನ್ನು ಸ್ವಾಮಿಗಳಿಗೆ ಕೈಕೋಳ ಹಾಕುವ ಶಕ್ಯತೆಯ ಬಗ್ಗೆ ತಿಳಿಸಿ, ಅದರಂತೆ ಅದಕ್ಕೆ ತಕ್ಕ ಸಿದ್ಧತೆ ಮಾಡಿಕೊಂಡು ಹೊರಟರು. ಸಂಗಡ ಬಹಳಿಷ್ಟು ಉಳಿದ ಪೋಲೀಸರೂ ಇದ್ದರು. ಎರಡು ಪೋಲೀಸ ಗಾಡಿ ಪೂರ್ತಿ ತುಂಬಿತ್ತು. ಆ ಪೋಲೀಸ ದಳದಲ್ಲಿದ್ದ ಶೇಖ ಮತ್ತು ಆತನ ವಿಶ್ವಾಸದ ಇಬ್ಬರು ಪೇದೆಗಳನ್ನು ಬಿಟ್ಟು, ಉಳಿದವರೆಲ್ಲ, ಸ್ವಾಮಿದರ್ಶನದ ಅಪೇಕ್ಷೆಯಿಂದ ಆನಂದದಿಂದಿದ್ದರು. ಆದರೆ, ‘ಮಧು ತಿಷ್ಠತಿ ಜಿವ್ಹಾಗ್ರೇ ಹೃದಯೇತು ಹಾಲಾಹಲಮ್’, ಎಂಬಂತೆ ಶೇಖನ ತ್ವೇಷ, ಒಳಗಿಂದೊಳಗೇ ಉರಿಯುತ್ತಿತ್ತು.

ಆ ಪೋಲೀಸ ಗಾಡಿಗಳು, ವರದಹಳ್ಳಿಯ ರಸ್ತೆಗೆ ತಿರುಗುತ್ತಿದ್ದಂತೆ, ತಳಿರು ತೋರಣಗಳ ಕಮಾನುಗಳು ಮತ್ತು ಅದರ ಮೇಲೆ, ‘ಶ್ರೀಧರ ಸ್ವಾಮಿ ಮಹಾರಾಜರಿಗೆ ಜಯವಾಗಲಿ’, ಎಂದು ಸುವರ್ಣಾಕ್ಷರಗಳಲ್ಲಿ ಬರೆದ ಫಲಕ ರಾರಾಜಿಸುತ್ತಿದ್ದುದು ಕಾಣಿಸಿತು. ಈ ರೀತಿಯ ಏಳು ಕಮಾನುಗಳನ್ನು ಆ ಗಾಡಿಗಳು ದಾಟಿದವು. ‘ಯಡಜಿಗಳೇಮನೆ’ ಬಂದ ಮೇಲೆ, ಅದರಂದ ಒಂದು ಫರ್ಲಾಂಗ ನಂತರವೇ, ಸಣ್ಣ – ದೊಡ್ಡ, ಹಳೆ – ಹೊಸ, ಸಾದಾ – ಭಾರೀ ಗಾಡಿಗಳ ಸಾಲೇ ಸಾಲು ಪ್ರಾರಂಭವಾಯಿತು. ಈ ಸಾಲು ಸುಮಾರು ಒಂದೂವರೆ ಮೈಲು ಉದ್ದ ಹಬ್ಬಿಗೊಂಡಿತ್ತು. ಗಾಡಿಗಳ ಆ ಸಾಲು ಸಾಲುಗಳನ್ನು ನೋಡಿದ ನಿರೀಕ್ಷಕ ಶೇಖನ ದರ್ಪ ತುಸು ತಣ್ಣಗಾಯಿತು, ‘ಈ ಕಡೆಯ ಇಷ್ಟು ಸಣ್ಣ ಹಳ್ಳಿಯಲ್ಲಿ ಒಬ್ಬನಿಗಾಗಿ ಇಷ್ಟೆಲ್ಲ ಗಾಡಿಗಳ ಸಾಲು?’ ಎಂದು ವಿಚಾರಕ್ಕೀಡಾದನು.
ಅಷ್ಟರಲ್ಲಿ ದೇವಿಯ ಮಂದಿರ ಬಂತು. ಅಲ್ಲಿಯ ಜನಸಾಗರವೆಂದರೆ ಜಾತ್ರೆಯೇ ಆಗಿತ್ತು. ಅನೇಕರು ಸ್ನಾನ ಮಾಡುತ್ತಿದ್ದರು, ಸಾವಿರಾರು ಜನರು ಊಟ ಮುಗಿಸಿ ಕೈ ತೊಳೆದುಕೊಳ್ಳುತ್ತಿದ್ದರು. ಅಸಂಖ್ಯ ಜನರು ಸ್ವಾಮಿಗಳ ದರ್ಶನಕ್ಕೆ ಸ್ವಾಮಿಗಳ ಕುಟಿಯಿರುವ ಗುಡ್ಡ ಹತ್ತುತ್ತಿದ್ದರು ಮತ್ತು ಹಾಗೆಯೇ ಅಸಂಖ್ಯ ಜನರು ಸ್ವಾಮಿಗಳ ದರ್ಶನ ಮುಗಿಸಿ ಗುಡ್ಡದಿಂದ ಕೆಳಗಿಳಿಯುತ್ತಿದರು. ಆ ಗುಡ್ಡದ ಅಕ್ಕಪಕ್ಕ, ಎಲ್ಲಿ ನೋಡಿದರಲ್ಲಿ ಜನಸಾಗರ ತುಂಬಿ ತುಳುಕುತ್ತಿತ್ತು.
ಆ ಪ್ರಚಂಡ ಜನದಟ್ಟಣೆ ನೋಡಿ ಅಚ್ಚರಿಗೊಂಡ ನಿರೀಕ್ಷಕನ ತೆರೆದ ಬಾಯಿ ಮುಚ್ಚದೇ ಉಳಿಯಿತು. ‘ನಾನೇನು ಸ್ವಪ್ನದಲ್ಲಿಲ್ಲವಲ್ಲ ಅಥವಾ ಯಾವುದೋ ಒಂದು ಸಿನೇಮಾ ನೋಡುತ್ತಿಲ್ಲವಲ್ಲ, ನಾನು ಎಚ್ಚರದಲ್ಲಿದ್ದೇನಲ್ಲಾ?’ ಎಂದು ಆತನಿಗೆ ಅನಿಸಿರಬಹುದು. ತನ್ನನ್ನು ತಾನೇ ಚಿವುಟಿ ಖಚಿತಪಡಿಸಿಕೊಂಡಿರಬೇಕು.

ಪೋಲೀಸ ಗಾಡಿಯವರೆಲ್ಲರೂ ತಮ್ಮ ಸಮವಸ್ತ್ರ ಕಳಚಿ, ಧೋತರ, ಪಂಚೆ ಧರಿಸಿದರು. ಶೇಖನೂ ಎಲ್ಲರಂತೆ ತಾನೂ ತನ್ನ ರಾಕ್ಷಸಾಕಾರಕ್ಕೆ ಧೋತರ ತೊಡಿಸಿದನು. ಅವನೊಡನೆ ಬಂದ ಉಳಿದವರೆಲ್ಲರ ಸ್ನಾನವಾಗುತ್ತಿರುವಾಗ, ಆ ಶೇಖನು, ತನ್ನ ದುರ್ಯೋಜನೆಯಂತೆ, ತನ್ನ ಎರಡು ಆಪ್ತ ಪೇದೆಗಳನ್ನು ಮಂಟಪದೊಳಗೆ ಕಳುಹಿಸಿ, ‘ಆ ಭೋಜನದ ಪಂಕ್ತಿಯಲ್ಲಿ ಎರಡೂವರೆ ಸಾವಿರ ಜನರು ಊಟ ಮಾಡುತ್ತಿದ್ದರು’, ಎಂದು ಬರೆದುಕೊಂಡು ಬರಲು ಕಳುಹಿಸಿದನು ಮತ್ತು ಅವರು ಮೂರ್ನಾಲ್ಕು ಜನರಿಂದ ಬರೆಸಿ, ಸಹಿ ತೆಗೆದುಕೊಳ್ಳಲು ಯಶಸ್ವಿಯೂ ಆದರು. ಅವರ ವ್ಯವಹಾರ ಸಂಶಯಾಸ್ಪದವಾಗಿರುವದು ಹೊಳೆದು, ಆಗತಾನೇ ಹಾಗೆ ಬರೆದುಕೊಟ್ಟ ಒಬ್ಬನು, ಸ್ವಾಮಿಗಳಿಗೆ ಈ ಸಂಗತಿ ತಿಳಿಸುವದೊಳ್ಳೆಯದೆಂದು ಗಡಿಬಿಡಿಯಿಂದ ಹೋಗುತ್ತಿರುವಾಗ, ಆತನು ಅಲ್ಲಿರುವ ಮತ್ತೊಬ್ಬನಿಗೆ ವಿಷಯ ತಿಳಿಸುತ್ತ, ‘ಈಗ ಪೋಲೀಸರ ಗಾಡಿ ಬಂದಿತ್ತಲ್ಲಾ, ಅದರಲ್ಲಿನ ಎರಡು ಪೋಲೀಸರು, ನಮ್ಮಿಂದ ಭೋಜನ ಪಂಕ್ತಿಯಲ್ಲಿ ೨೫೦೦ ಜನರು ಊಟ ಮಾಡಿದರು, ಎಂದು ಬರೆಸಿ, ನಮ್ಮ ಸಹಿ ತೆಗೆದುಕೊಂಡರು. ಯಾಕೆ, ಏನು ನಡೆದಿದೆ ಎಂದೇ ಅರ್ಥವಾಗುತ್ತಿಲ್ಲ’, ಎಂದು ಹೇಳಿದನು. ಆ ಮಾತನ್ನು ಅಲ್ಲೇ ಹತ್ತಿರದಲ್ಲಿ ನಿಂತಿದ್ದ, ಪೌಜದಾರ ದೇಸಾಯಿ ಕೇಳಿಸಿಕೊಂಡರು. ಆಗ, ತಕ್ಷಣ ಅವರ ತಲೆಯಲ್ಲಿ ಒಮ್ಮೆಲೇ ಪ್ರಖರ ಪ್ರಕಾಶ ಬಿತ್ತು. ಇದೆಲ್ಲ ಕಾರಸ್ಥಾನ ಆ ಶೇಖನದೇ ಎಂದು ಹೊಳೆಯಿತು. ‘ಆದರೆ ಈಗ ಮಾತನಾಡಿ ಏನು ಪ್ರಯೋಜನ? ನಾನೇ ಅವನನ್ನು ಕರೆದುಕೊಂಡು ಬಂದೆ. ಆದರೆ, ಆತನು ಈ ರೀತಿ ಏನಾದರೂ ಮಾಡಬಹುದೆಂದು ನನಗೆ ಸ್ವಲ್ಪವೂ ಕಲ್ಪನೆಗೆ ಬರಲಿಲ್ಲ’ ಎಂದು ತಳಮಳ ಪಡುತ್ತ, ಈಗೇನು ಮಾಡಬೇಕೆಂದು ವಿಚಾರ ಮಾಡುತ್ತಿರಲು, ಅವರಿಗೊಂದು ಯುಕ್ತಿ ಹೊಳೆಯಿತು. ಅವರು ಮಧ್ಯಕುಟಿಯಲ್ಲಿ ತನ್ನ ಪೇದೆಗಳನ್ನು ಕೂರಿಸಿ, ಆ ಸಮಾರಂಭದ ವ್ಯವಸ್ಥಾಪನೆಯ ಮೇಲ್ವಿಚಾರಕರಾದ, ಗಣಪತಿ ಮಾಸ್ತರರು ಎಲ್ಲಿದ್ದಾರೆಂದು ಅವರಿವರ ಹತ್ತಿರ ಕೇಳಿ ತಿಳಿದುಕೊಂಡರು. ಗಣಪತಿ ಮಾಸ್ತರರು ಮಧ್ಯಕುಟಿಯಲ್ಲಿಯೇ, ದೇವರ ಕೋಣೆಯಲ್ಲಿದ್ದಾರೆಂದು ಅರಿತ, ದೇಸಾಯಿಯವರು, ತಕ್ಷಣ ಅವರನ್ನು ಸಿಕ್ಕು, ಅವರನ್ನು ಬದಿಗೆ ಕರೆದು, ಎಲ್ಲ ವಿಷಯ ತಿಳಿಸಿದರು. ಗಣಪತಿ ಮಾಸ್ತರರು, ‘ಸರಿ! ಅವರಿಗೆ ಮೊದಲು ಸ್ವಾಮಿಗಳ ದರ್ಶನವಾಗಲಿ. ನಂತರ ನೋಡೋಣ. ನಾನು ಮುಂದೆ ಹೋಗಿ ಸ್ವಾಮಿಗಳಿಗೆ ವಿಷಯ ತಿಳಿಸುತ್ತೇನೆ. ನೀವು ಅವರನ್ನು ಮೇಲೆ ಕರೆದುಕೊಂಡು ಬನ್ನಿ’, ಎಂದು ಹೇಳಿ, ಸ್ವಾಮಿಗಳಿದ್ದಲ್ಲಿಗೆ ಹೋದರು. ಸ್ವಾಮಿಗಳಿಗೆ ವಿಷಯ ತಿಳಿಸಿ, ಅಲ್ಲಿ ನೆರೆದಿದ್ದ ಅಸಂಖ್ಯ ಭಕ್ತಜನರನ್ನು ಸರಿಸುತ್ತ ಸ್ವಾಮಿಗಳನ್ನು ಒಳಗಿನ ಕೋಣೆಯೊಳಗೆ ಕರೆದೊಯ್ದು ಅಲ್ಲಿ ಅವರ ಎಂದಿನ ಆಸನದ ಮೇಲೆ ಕುಳ್ಳಿರಿಸಿದರು. ಅಷ್ಟರಲ್ಲಿ ಆ ಮುಸಲ್ಮಾನ ನಿರೀಕ್ಷಕ ಮತ್ತು ಆತನ ಸಂಗಡಿಗರು ದೇಸಾಯಿಯವರೊಂದಿಗೆ ಅಲ್ಲಿಗೆ ಬಂದರು.

ಸ್ವಾಮಿಗಳ ಸಿಂಹಾಸನದ ಮುಂದೆ, ವಿಧವಿಧದ ಹಣ್ಣು ಹಂಪಲಗಳ ರಾಶಿ, ದೊಡ್ಡ ದೊಡ್ಡ ಮೊತ್ತಗಳ ನೋಟಿನ ಗುಡ್ಡೆ ಮತ್ತು ಪ್ರಚಂಡ ಜನಸಮೂಹ ನೋಡಿದ, ಆ ಯವನ ಸಿ. ಆಯ್. ಡಿ ನಿರೀಕ್ಷಕನ ಪ್ರಾಪಂಚಿಕ ದೃಷ್ಟಿಕೋನವೂ ತನ್ನ ಕುಶಂಕೆಗಳನ್ನು ಬಿಟ್ಟು, ಸ್ವಾಮಿಗಳು ನಿಜವಾಗಿಯೂ ಒಬ್ಬ ಶ್ರೇಷ್ಠ ಮಹಾನ ಪುರುಷರೆಂಬುವದರಲ್ಲಿ ಸಂಶಯವಿಲ್ಲವೆಂಬ ಅಭಿಪ್ರಾಯಕ್ಕೆ ಬರಹತ್ತಿತು. ತಾನು ಸುಮ್ಮನೇ ಅವರ ಪರೀಕ್ಷೆ ಮಾಡಲು ಬಂದೆ. ದೊಡ್ಡವರು ದೊಡ್ಡವರೇ; ಅವರು ಎಲ್ಲಿದ್ದರೇನು? ತಾನು ನಿಜವಾಗಿಯೂ ಒಂದು ಭಯಂಕರ ದೊಡ್ಡ ತಪ್ಪೇ ಮಾಡಿದೆ, ಎಂದು ಅನಿಸಹತ್ತಿತು. ಸಾವಿರಾರು ಜನರು ಯಾರ ಮುಂದೆ ತಲೆ ಬಾಗಿಸುತ್ತಾರೋ, ಬದುಕಿದ್ದಾಗಲೇ ಯಾರ ಧೂಪಾರತಿ, ಪೂರ್ಣಾರತಿಯಾಗುತ್ತದೆಯೋ, ಯಾರ ಕುತ್ತಿಗೆಗೆ ಹಾಕಿದ ಹಾರಗಳೇ ಗುಡ್ಡದಷ್ಟಿದೆಯೋ, ಯಾರ ಮುಂದೆ ಹಣದ ಮಳೆಯೇ ಸುರಿಯುತ್ತಿದೆಯೋ, ಬಯಸಿದ್ದನ್ನು ಪಡೆಯುವ, ನಡೆಸುವ ಸಿದ್ಧಿ ಯಾರಿಗಿದೆಯೋ, ಅವರ ಮುಂದೆ ತಾನಾದರೋ ಹುಲು ಮಾನವ! ನನ್ನ ದುಷ್ಟ ಬುದ್ಧಿಗೆ ಧಿಃಕ್ಕಾರ! ಈಗೇನು ಮಾಡಬೇಕು? ಈ ರೀತಿಯಾಗಿ ಚಿಂತನ ಮಾಡುತ್ತಾ, ಇಲ್ಲಿಯವರೆಗಿನ ತನ್ನ ವಿಚಾರ ಮತ್ತು ಕೃತ್ಯಗಳ ಬಗ್ಗೆ, ಆತನು ಮನಸ್ಸಿನಲ್ಲೇ ತುಂಬಾ ಪಶ್ಚಾತ್ತಾಪ ಪಡಹತ್ತಿದನು. ಅವನು ನೋಡು ನೋಡುತ್ತಲೇ, ಎಲ್ಲರೂ ಸ್ವಾಮಿಗಳ ಮುಂದೆ ಬಂದರು. ಫೌಜದಾರ ದೇಸಾಯಿಯವರು, ಮೊದಲು ಸ್ವಾಮಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಸ್ವಾಮಿಗಳು, ‘ಮಗಾ! ಎಲ್ಲಾ ಕ್ಷೇಮವಿದೆಯಲ್ಲಾ! ಸುಖದಿಂದಿರು’, ಎಂದು ಹೇಳುತ್ತ, ಆತನ ಬೆನ್ನ ಮೇಲೆ ಕೈಯಾಡಿಸಿದರು.

ಶೇಖನೂ ದೇಸಾಯಿಯವರಂತೆಯೇ, ಸ್ವಾಮಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಸ್ವಾಮಿಗಳ ಪಾದ ಸ್ಪರ್ಷವಾಗುತ್ತಿದ್ದಂತೆಯೇ, ಆತನ ಶರೀರದಲ್ಲಿ ವಿದ್ಯುತ್ ಪ್ರವಾಹ ಹರಿದಂತಾಗಿ, ಆತನಿಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪದಿಂದ ಪರಿತಪಿಸಹತ್ತಿದನು. ಸ್ವಾಮಿಗಳ ಪಾದಗಳನ್ನು ಗಟ್ಟಿಯಾಗಿ ಹಿಡಿದು, ಅಳಲಿಕ್ಕೆ ಹತ್ತಿದನು. ಅಕ್ಷರಶಃ ಆತನ ಕಣ್ಣುಗಳಿಂದ ನೀರಿನ ಧಾರೆಯೇ ಸುರಿಯುತ್ತಿತ್ತು. ಸ್ವಾಮಿಗಳು, ಅವನೆಡೆ ಅದೆಷ್ಟು ಪ್ರೇಮಪೂರ್ವಕವಾಗಿ ನೋಡಿದರೆಂದರೆ, ಆತನ ಸಂಪೂರ್ಣ ಅಹಂಕಾರ ನಷ್ಟವಾಯಿತು. ಆ ದೃಶ್ಯ ನೋಡುತ್ತಿದ್ದವರ ಕಣ್ಣುಗಳೂ ಒದ್ದೆಯಾದವು. ಎಲ್ಲರಲ್ಲೂ ಕಾರುಣ್ಯ ಭಾವ ಕಾಣಸಿಗುತ್ತಿತ್ತು. ಸ್ವಾಮಿಗಳು ಆ ಶೇಖನ ಬೆನ್ನ ಮೇಲೆ ಕೈಯಾಡಿಸುತ್ತ, ಅತಿ ಪ್ರೇಮಭಾವದಿಂದ, ‘ಮಗಾ! ಯಾಕೆ ಅಳುತ್ತಿರುವೆ? ನಿನಗೆ ಏನು ದುಃಖವಿದೆ? ನಿನೆ ಏನು ಚಿಂತೆಯಿದೆ? ಒಳ್ಳೆಯದು, ಹೇಳು, ನನಗೆ ಎಲ್ಲಾ ಹೇಳು’, ಎಂದು ಕೇಳಿದರು. ಸ್ವಾಮಿಗಳ ಆ ಮಧುರ ವಾಣಿಯನ್ನು ಕೇಳುತ್ತಿದ್ದಂತೆಯೇ, ‘ಸ್ವಾಮೀ! ನಾನು ತಪ್ಪು ಮಾಡಿದೆ! ನಾನು ಅಪರಾಧಿ!’, ಎನ್ನುತ್ತಿರಲು ಆ ಶೇಖನ, ಅಳುವಿನ ಕಟ್ಟೆಯೇ ಒಡೆಯಿತು. ತದನಂತರ, ಎಷ್ಟೋ ಕಾಲ ಸ್ವಾಮಿಗಳು ಅವನ ಬೆನ್ನ ಮೇಲೆ ಕೈಯಾಡಿಸುತ್ತಿರಲು ಆತನು ಶಾಂತನಾದನು. ಆತನು ನಡೆದೆಲ್ಲ ವಿಷಯಗಳನ್ನು, ತನ್ನೆಲ್ಲ ದುಷ್ಟ ವಿಚಾರಗಳನ್ನು ಹೇಳಿಕೊಂಡು ಆಗಿಹೋದ ಅಪರಾಧದ ಬಗ್ಗೆ ಸ್ವಾಮಿಗಳಲ್ಲಿ ಕ್ಷಮಾಯಾಚನೆ ಮಾಡಿದನು. ಬ್ರಹ್ಮಾಂಡಕ್ಕೇ ಆಧಾರರೂಪ, ಸಕಲ ಜೀವಿಗಳ ಆತ್ಮರೂಪ, ಪರಬ್ರಹ್ಮಸ್ವರೂಪ, ಪರಮಹಂಸ, ಪರಿವ್ರಾಜಕ, ಸದ್ಗುರು, ಭಗವಾನ ಶ್ರೀ ಶ್ರೀಧರ ಸ್ವಾಮಿಗಳು ಆ ಯವನ ಪತಿತನಿಗೆ ಕ್ಷಮೆ ಮಾಡಿದರು. ನಂತರ, ಎಲ್ಲರಿಗೂ ತೀರ್ಥ ಕೊಟ್ಟು, ‘ಮಕ್ಕಳಿರಾ! ತಡವಾಗಿಬಿಟ್ಟಿದೆ. ನೀವೆಲ್ಲಾ ಹೊಟ್ಟೆ ತುಂಬಾ ಊಟ ಮಾಡಿಕೊಂಡು ಬನ್ನಿ. ನಾನು ಮಂತ್ರಾಕ್ಷತೆ ಕೊಡುತ್ತೇನೆ’, ಎಂದು ಹೇಳಿದರು. ಸ್ವಾಮಿಗಳ ಅಪ್ಪಣೆಯಂತೆ, ಎಲ್ಲರೂ ಮನಸೋಕ್ತ ಆನಂದದಿಂದ ಊಟಮಾಡಿದರು ಮತ್ತು ಮಂತ್ರಾಕ್ಷತೆ ತೆಗೆದುಕೊಳ್ಳಲು, ತಿರುಗಿ ಸ್ವಾಮಿಗಳ ಸಮ್ಮುಖ ಬಂದರು. ಆಗ ಆ ಶೇಖನು, ಸ್ವಾಮಿಗಳ ಹತ್ತಿರ, ತನ್ನನ್ನೂ ಶಿಷ್ಯನಾಗಿ ಸ್ವೀಕರಿಸಲು, ಬಹುದೀನನಾಗಿ ಬಿನ್ನವಿಸಿಕೊಂಡನು. ಆತನು, ‘ನಾನು ಇಂದಿನಿಂದಲೇ ಮಾಂಸಭಕ್ಷಣೆ ಮೊದಲಾದ ಅಭಕ್ಷ ಭಕ್ಷಗಳನ್ನು ತ್ಯಜಿಸುತ್ತೇನೆ. ನೀವು ವಿಧಿಸುವ ಎಲ್ಲ ನಿಯಮಗಳನ್ನು ಪಾಲಿಸುತ್ತೇನೆ ಮತ್ತು ತಮ್ಮ ಕೃಪೆಗೆ ಯೋಗ್ಯವಾಗುವಂತಹ ನಡವಳಿಕೆಗಳನ್ನೇ ಆಚರಿಸುತ್ತೇನೆ’, ಎಂದು ಶಪಥ ತೊಡಲು, ಸ್ವಾಮಿಗಳು ಅದೇ ಗುರುವಾರ, ನಂತರ ಅವನನ್ನು ಕರೆಸಿ, ಅನುಗ್ರಹವಿತ್ತು, ಆ ಪತಿತನನ್ನೂ ಪುನೀತನನ್ನಾಗಿ ಮಾಡಿದರು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಪೌಷ, ೧೯೦೧ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img