Memories

37. ಅಂತ್ಯಕಾಲದಲ್ಲಿ ಗುರು ಸಾಕ್ಷಾತ್ಕಾರ

(ನಿರೂಪಣೆ : ಶ್ರೀಧರಭಕ್ತ ಶ್ರೀ ರಮೇಶಚಂದ್ರ ಕಾರಖಾನೀಸ, ಸಾತಾರಾ)

ನಾನು ಸ್ವಾಮಿಗಳಿಂದ ಅನುಗ್ರಹೀತನಾಗಿರುವದರಿಂದ, ನನ್ನ ಹತ್ತಿರ, ಶ್ರೀಗುರುಮಾಯಿಯ ಫೋಟೋ, ಪಾದುಕೆಗಳಿದ್ದು, ಅವುಗಳ ನಿತ್ಯಪೂಜೆ, ಆರತಿ, ಭಜನೆ-ಹಾಡುಗಳ ಸೇವೆ ಮತ್ತು ಅಖಂಡ ನಾಮಸ್ಮರಣೆ ನಡೆಯುತ್ತಿರುತ್ತದೆ. ನಾವು ಇರುವ ಮನೆ ಸಣ್ಣದಾಗಿರುವದರಿಂದ, ನನ್ನ ಅನಾರೋಗ್ಯದಿಂದ ಬಳಲುತ್ತಿರುವ ತಂದೆ, ಆ ಪೂಜಾಸ್ಥಳದ ಮುಂದೆಯೇ ಮಲಗಿರುತ್ತಿದ್ದರು.

ದಿನಾಂಕ ೧೮ – ೧೨ – ೧೯೬೯, ಗುರುವಾರ …
ನನ್ನ ತಂದೆ, ‘ನನಗಿನ್ನು ಕೆಲವೇ ದಿವಸಗಳುಳಿದಿವೆ! ಸುಮ್ಮನೇ ಯಾಕೆ ಡಾಕ್ಟರರ ಚಿಕಿತ್ಸೆಯ ಪ್ರಯತ್ನ ಮಾಡುತ್ತೀರಿ?’ ಎಂದು ಹೇಳಿದರು. ಆದರೂ ನಾವು ಚಿಕಿತ್ಸೆ ಮುಂದುವರಿಸಿದ್ದೆವು. ಮರುದಿನ ಸಂಜೆಮುಂದೆ, ನನ್ನ ತಾಯಿಗೆ ಪರೋಕ್ಷವಾಗಿ ತನ್ನ ಮೃತ್ಯುವಿನ ಸೂಚನೆ ಕೊಟ್ಟು, ‘ನೀನು ಎರಡೂ ಮಕ್ಕಳನ್ನು ನೋಡಿಕೋ’, ಎಂದು ಹೇಳಿದರು. ಶನಿವಾರ ಬೆಳಿಗ್ಗೆ ಅವರು, ‘ನಾನು ಇಂದು ಹೋಗುವವನಿದ್ದೇನೆ. ಶ್ರೀಸಮರ್ಥ ಮತ್ತು ಭಗವಾನ ಶ್ರೀಧರ ಸ್ವಾಮಿಗಳು – ಸಂಪೂರ್ಣ ವಿಶ್ವದ ಗುರುಮಾತೆಯರೇ ಆದ – ಅವರ ಸಾಕ್ಷಾತ್ಕಾರವಾಯಿತು. ನಿಮ್ಮೆಲ್ಲರ ಮೇಲೆ ಅವರ ಕೃಪಾದೃಷ್ಟಿ ಇದೆ ಮತ್ತು ನನಗೆ ಸುಖದಿಂದ ದೇಹ ಬಿಟ್ಟುಬಿಡಲು ಅಪ್ಪಣೆ ಮಾಡಿದ್ದಾರೆ. ಹಾಗಾಗಿ, ನೀವೆಲ್ಲರೂ ಇಂದು ಉಪವಾಸ ಮಾಡುವದು ಬೇಡ.

ಆನಂದದಿಂದಿರಿ’,ಎಂದು ಹೇಳಿದರು. ನಾವು ಆ ದಿನ ಅವರೆಂದಂತೆ ಉಪವಾಸ ಮಾಡದೇ, ಅವರ ಹತ್ತಿರವೇ ನಮ್ಮ ದುಃಖಾಶ್ರು ತಡೆದುಕೊಳ್ಳುತ್ತ ಕುಳಿತಿದ್ದೆವು. ಆಗ ನಮ್ಮ ತಂದೆಯವರು, ‘ಬ್ರಹ್ಮನೇ ಅಡ್ಡಾಗಿ ಬಂದರೂ ಆಗುವದನ್ನು ತಪ್ಪಿಸಲಾಗುವದಿಲ್ಲ, ಹೀಗಿರುವಾಗ ನೀವೇಕೆ ಸುಮ್ಮನೇ ಅಳುತ್ತಿದ್ದೀರಿ? ನಾನೀಗ ನಾಮಸ್ಮರಣೆ ಮಾಡುತ್ತೇನೆ’, ಎಂದು ಹೇಳಿದರು. ಅವರು ನಾಮಸ್ಮರಣೆ ಮಾಡಹತ್ತಿದರು. ಅವರ ಇಂಗಿತದಂತೆ ನಾವು ಅವರಿಂದ ತುಸು ದೂರ ಹೋಗಿ ಕುಳಿತೆವು. ಐದು – ಹತ್ತು ನಿಮಿಷಗಳಾಗಿರಬಹುದು, ಅಷ್ಟರಲ್ಲೇ, ಅವರ ಜೀವಜ್ಯೋತಿ ದೇವರಲ್ಲಿ ವಿಲೀನವಾಯಿತು. ನಮ್ಮ ತಂದೆಯವರು ಶ್ರೀರಾಮಚಂದ್ರನ ನಿಸ್ಸೀಮ ಭಕ್ತರಾಗಿದ್ದರು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಪೌಷ ೧೯೦೧, ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img