Memories

39. ಸ್ವಾಮಿಗಳ ಉಜ್ವಲ ರಾಷ್ಟ್ರಪ್ರೇಮ (ಭಾಗ೨)

(ನಿರೂಪಣೆ : ಶ್ರೀಧರಸ್ವಾಮಿಗಳ ವರಶಿಷ್ಯ ಶ್ರೀ ಪೃಥ್ವೀರಾಜ ಭಾಲೇರಾವ, ಪುಣೆಯವರ ‘ಚರಿತ್ರ ಉನ್ಮೇಷ’೧೯೭೧ದ ಪುಟಗಳಿಂದ)

ಚೀನದೇಶದಿಂದ ಭಾರತದ ಮೇಲೆ ಆಕ್ರಮಣ:
ಸ್ವಾಮಿಗಳ ಅಲೌಕಿಕ ಚರಿತ್ರೆ ಮತ್ತು ಅವರ ದಿವ್ಯ ಕಾರ್ಯಗಳ ಮೇಲಿನ, ಪ್ರಾಚಾರ್ಯ ಶ್ರೀ ಶಿವಾಜಿರಾವ ಭೋಸಲೆಯವರ ಆ ಕಾಲದ ಪ್ರವಚನಗಳು, ಕೇಳುಗರ ಮನತಟ್ಟುವಂತಿದ್ದವು. ತಮ್ಮ ಆ ಪ್ರವಚನಗಳಲ್ಲಿ ಅವರು ಸ್ಪಷ್ವವಾಗಿ ಒತ್ತಿ ಹೇಳಿದ ಒಂದು ವಿಷಯವೇನೆಂದರೆ, ಆಗಿನ ರಾಜಕೀಯ ಧುರೀಣರ ಬೇಜವಾಬ್ದಾರಿಯ ಧೋರಣೆಗಳಿಂದಾಗಿ, ಇಸವಿ ಸನ ೧೯೬೨ರಲ್ಲಿ, ಚೈನಾದ ಪಾಶವೀ ಆಕ್ರಮಣವನ್ನು ತಡೆಗಟ್ಟುವ ಭೌತಿಕ ಶಕ್ತಿ ಭಾರತಕ್ಕೆ ಇಲ್ಲವಾಗಿತ್ತು ಮತ್ತು ಈ ವಿಷಯ ಈಗಂತೂ ತೆರೆದಿಟ್ಟ ಸತ್ಯವೇ ಆಗಿದೆ ಎಂದವರು ಹೇಳುತ್ತಿದ್ದರು. ಆ ಆಕ್ರಮಣ ತಡೆಗಟ್ಟಿದ್ದು, ಕೇವಲ ಭಾರತದ ಮಹಾತ್ಮರ ದಿವ್ಯ ಶಕ್ತಿಯೇ! ಈ ರೀತಿಯ ಮಹಾನ ವಿಭೂತಿಗಳಲ್ಲಿ ಇಬ್ಬರು ಮಾತ್ರ, ಮಿನುಗುತ್ತಿರುವ ನಕ್ಷತ್ರಗಳಂತೆ ಸ್ವಪ್ರಭೆಯಿಂದ ಬೆಳಗುತ್ತಿದ್ದರು. ಅವರೆಂದರೆ, ಭಗವಾನ ಶ್ರೀಧರ ಸ್ವಾಮಿಗಳು ಮತ್ತು ಅರವಿಂದಾಶ್ರಮದ ಶ್ರೀಮಾತಾಜಿ! ಈ ವಾಕ್ಯ ನನ್ನದಾಗಿರದೇ, ಆ ಪ್ರಾಚಾರ್ಯರು ಬಹಿರಂಗ ವ್ಯಾಖ್ಯಾನದಲ್ಲಿ ಮಾಡಿದ ಸತ್ಯ ಪ್ರತಿಪಾದನೆಯಾಗಿದೆ! ಈ ಸತ್ಯವನ್ನು ಆ ಕಾಲದಲ್ಲೇ, ದಿವ್ಯದೃಷ್ಟಿಯಿದ್ದ ಅನೇಕ ವರ್ಯಸಾಧಕರು ಮತ್ತು ಸಿದ್ಧರು ತಮ್ಮ ಅಲೌಕಿಕ ಜ್ಞಾನದಿಂದ ಅರಿತುಕೊಂಡಿದ್ದರು. ನಾನಾದರೋ ಸಾಧಾರಣ ಸಾಧಕನಿದ್ದೇನೆ. ಆದಾಗ್ಯೂ, ೧೯೬೨ರಿಂದ ೧೯೬೬ರ ಆ ವೇಳೆಯಲ್ಲಿ, ಸ್ವಾಮಿಗಳು ಸಂದರ್ಭಕ್ಕನುಸಾರವಾಗಿ, ಏನೇನು ಉದ್ಗಾರ ತೆಗೆದಿದ್ದರೋ ಮತ್ತು ಅದಕ್ಕನುಸಾರವಾಗಿ ಆಗಾಗ ಏನೇನು ಕ್ರಿಯೆಗಳನ್ನು ಮಾಡಿದ್ದರೋ, ಅವುಗಳಿಂದ ನಾನು, ಬಹಳ ಮೊದಲೇ ಇದರ ಬಗ್ಗೆ ಅಂದರೆ, ‘ಆ ಭೀಷಣ, ಮಹಾವಿನಾಶಕಾರೀ ಚೀನದ ಆಕ್ರಮಣವನ್ನು ಸ್ವಾಮಿಗಳು ತಮ್ಮ ತಪೋಬಲದಿಂದಲೇ ತಡೆಹಿಡಿದರು’, ಎಂಬುದರ ಬಗ್ಗೆ ನಿಶ್ಚಯಚಿತ್ತನಾಗಿದ್ದೆ. ಇದಕ್ಕೆ ಸಂಬಂಧಿಸಿದಂತೆ ಒಂದು ಘಟನೆಯಲ್ಲಿ, ಯುದ್ಧಕ್ಕೆ ಹೊರಟ ತನ್ನ ಪತಿಗೆ ತಮ್ಮ ವರದಹಸ್ತದಿಂದ ಅದೆಂತು ಸ್ವಾಮಿಗಳು, ಏಕಾಂತ ಮೌನದ ಸಮಯದಲ್ಲೂ, ಆಲಂಗಿಸಿ, ಬೆನ್ನು ತಟ್ಟಿ, ಮಾತೃಭೂಮಿಯ ಸಂಕಟ ಅವಶ್ಯ ನಿವಾರಣೆಯಾಗುವದೆಂಬ ಭರವಸೆಯೊಂದಿಗೆ ಆಶೀರ್ವದಿಸಿದರೆಂಬುದು, ಆ ಸೈನ್ಯದ ಅಧಿಕಾರಿಯ ಪತ್ನಿಯ ನಿರೂಪಣೆ(೫೫ಅ) ಯಲ್ಲಿ ಬಂದಿದೆ.

ಬದರಿಕಾಶ್ರಮದಲ್ಲಿ ತಪಶ್ಚರ್ಯ:
ಇಸವಿ ಸನ ೧೯೬೩ರ ಜಾನೇವರಿ …
ಸ್ವಾಮಿಗಳು ವರದಪುರದಲ್ಲಿ ಸಂಪೂರ್ಣ ಏಕಾಂತ, ಮೌನವೃತದ, ಅತ್ಯಂತ ಕಠೋರ ತಪಶ್ಚರ್ಯ ಎರಡು ವರ್ಷಗಳ ಕಾಲಮಾಡಿದರು. ಮುಂದೆ, ಬೇರೆ ಬೇರೆ ಕಡೆಯಿಂದ ಬರುತ್ತಿದ್ದ ಅಸಂಖ್ಯ ಭಕ್ತಜನರು ಅತ್ಯಂತ ಕಳವಳದಿಂದ, ವಿನಂತಿ ಮಾಡಿಕೊಳ್ಳಲು, ಸ್ವಾಮಿಗಳು ಇಸವಿ ಸನ ೧೯೬೫, ಫೆಬ್ರುವರಿಯಲ್ಲಿ, ಕೇವಲ ಎಂಟು ದಿನಗಳಿಗಾಗಿ ಏಕಾಂತ – ಮೌನ ತ್ಯಜಿಸಿದರು ಮತ್ತು ಅಹೋರಾತ್ರ ಎಲ್ಲ ದರ್ಶನಾರ್ಥಿಗಳಿಗೆ ದರ್ಶನಭಾಗ್ಯ ಕೊಟ್ಟರು. ಎಂಟು ದಿನಗಳ ನಂತರ ಸ್ವಾಮಿಗಳು ಮೊದಲಿನಂತೆ, ಏಕಾಂತತಪಸ್ಸನ್ನು ಮತ್ತೆ ಪ್ರಾರಂಭ ಮಾಡಿದರು. ಮುಂದೆ, ಎರಡು ಮೂರು ತಿಂಗಳುಗಳಲ್ಲೇ, ಅವರು ಹಿಮಾಲಯದ ಸೀಮೆಯ ಹತ್ತಿರ ಹೋಗಿ ತಪಸ್ಸು ಮಾಡುವದು ಅತ್ಯಾವಶ್ಯಕವೆಂದು ನಿಶ್ಚಯಿಸಿ, ತಕ್ಷಣ ಹಿಮಾಲಯಕ್ಕೆ ಹೊರಟರು. ಉತ್ತರಕಾಂಡದ ಪವಿತ್ರಕ್ಷೇತ್ರ ಬದರಿಕಾಶ್ರಮವನ್ನು ತಮ್ಮ ತಪಸ್ಸಿಗೆಂದು ನಿಶ್ಚಯಿಸಿದರು. ಬದರಿಕಾಶ್ರಮವನ್ನು ಆರಿಸಲು, ಎರಡು ಕಾರಣಗಳಿದ್ದವು. ಒಂದನೆಯ ಮುಖ್ಯ ಕಾರಣ ಸ್ವಾಮಿಗಳ ಸನ್ಯಾಸದೀಕ್ಷೆಯ ಮೂಲಗುರು ಶ್ರೀಮನ್ನಾರಾಯಣನೇ ಆಗಿರುವದರಿಂದ, ಅವನ ಸನ್ನಿಧಿಯಲ್ಲಿದ್ದು ತಪಗೈಯ್ಯುವದು. (ನಿಜಗುರು ಶ್ರೀಸಮರ್ಥರ ಮುಂದೆ ಸಜ್ಜನಡದಲ್ಲಿ ಇದಕ್ಕೂ ಮೊದಲು, ಸ್ವಾಮಿಗಳುಎರಡು ಬಾರಿ ಏಕಾಂತ ತಪಸ್ಸು ಮಾಡಿದ್ದರು) ಎರಡನೆಯ ಕಾರಣ, ಈ ಪ್ರದೇಶ ಚೈನಾದ ಅಂಕಿತದಲ್ಲಿರುವ ಟಿಬೆಟ್ಟ ದೇಶದ ಗಡಿಗೆ ಹೊಂದಿಕೊಂಡಿದ್ದು, ಚೀನದೇಶದ ಸೇನೆ ಭಾರತದ ಗಡಿಯ ಹತ್ತಿರ ಅಲ್ಲಿ ಬೀಡು ಬಿಟ್ಟಿತ್ತು, ಎಂಬುದೇ ಇರಬೇಕು.

ಆ ವೇಳೆ ಪಾಕಿಸ್ತಾನ, ಭಾರತದ ವಿರುದ್ಧ ಯುದ್ಧ ಸಾರಿತ್ತು ಮತ್ತು ಪಾಕಿಸ್ತಾನದ ಸಹಾಯಕ್ಕೆ, ಅದರ ಮಿತ್ರರಾಷ್ಟ್ರ ಚೀನದೇಶವೂ ಬೆಂಬಲವಾಗಿ ಯುದ್ಧ ಘೋಷಿಸುವ ಶಕ್ಯತೆಯಿತ್ತು.

ಶ್ರೀ ಬದರಿನಾರಾಯಣ ಕ್ಷೇತ್ರದಲ್ಲಿ ಸ್ವಾಮಿಗಳು ಆರು ತಿಂಗಳ ಪರ್ಯಂತ ದಿವ್ಯ ತಪಸ್ಸು ಮಾಡಿದರು. ಚಾತುರ್ಮಾಸ ಮುಗಿದ ಮೇಲೆ ಸಂಪೂರ್ಣ ಏಕಾಂತವಿತ್ತು. ಆ ಸಮಯದಲ್ಲಿ ಪ್ರತಿ ರಾತ್ರಿ ಉತ್ತರದಿಕ್ಕಿಗೆ ಮುಖ ಮಾಡಿ, ನಿಂತು ತಪಸ್ಸು ಮಾಡುತ್ತಿದ್ದರು. ಸ್ವಾಮಿಗಳ ಸೇವೆಗೆ ಆ ಸಮಯದಲ್ಲಿ ಕೇವಲ ಒಬ್ಬ ಶಿಷ್ಯನಿದ್ದನು. ಆತನು ಒಮ್ಮೆ ಒಂದು ಅಲೌಕಿಕ ದೃಶ್ಯ ನೋಡಿದನು.

ರಾತ್ರಿ ಹನ್ನೆರಡು ಗಂಟೆ…
ಸ್ವಾಮಿಗಳು ಉತ್ತರಾಭಿಮುಖವಾಗಿ ವೀರಾವೇಶದಿಂದ ನಿಂತಿದ್ದರು. ಪ್ರತಾಪ ಮಾರುತಿಯ ಮುದ್ರೆ ಧಾರಣೆ ಮಾಡಿದ್ದರು. ಬಲಗೈ ಮತ್ತು ಬಲಗಾಲು ಮೇಲೆತ್ತಿದ್ದರು. ಮುಖಚರ್ಯೆ ಅತ್ಯಂತ ಉಗ್ರಕಳೆಯಿಂದ ಶೋಭಿಸುತ್ತಿತ್ತು. ಮೇಲೆತ್ತಿದ್ದ ಕೈಯಿಂದ ಅಗ್ನಿಯ ಜ್ವಾಲೆ ಮೇಲೇಳಹತ್ತಿತು. ಆ ಜ್ವಾಲೆಯ ಗಮನಮಾರ್ಗ ಸೀಮಾಂತ ಕ್ಷೇತ್ರ ಮಾಣಕಗ್ರಾಮದಿಂದಲೂ (ಮಾನಾಪಾಸ) ಆಚೆ ಹೋಗುತ್ತಿದ್ದುದನ್ನು ಆತನು ನೋಡಿದನು. ಆ ದಿವ್ಯ ತೇಜಸ್ಸನ್ನು ನೋಡಿ, ನನ್ನ ಆ ಗುರುಬಂಧುವು ಆಶ್ಚರ್ಯ ಚಕಿತನಾಗಿ ಆತನ ಬಾಯಿಂದ ಶಬ್ದ ಹೊರಬರದಂತಾಯಿತು, ಕಾಲ್ಕೀಳಲಶಕ್ಯವಾಯಿತು, ನಿಂತಲ್ಲೇ ನಿಲ್ಲುವಂತಾಯಿತು. ಅಗ್ನಿತೇಜದ ಪ್ರಕ್ಷೇಪಣದ ಈ ಅಮೋಘ ಕಾರ್ಯ ಎಷ್ಟೋ ತಾಸುಗಟ್ಟಲೇ ನಡೆದಿತ್ತು. ಕೊನೆಗೆ ಆ ಜ್ಯೋತಿಯ ತೇಜಸ್ಸು ಸಹನಾತೀತವಾಗಲು, ಆ ನನ್ನ ಗುರುಬಂಧು ಅಲ್ಲಿಂದ ಪ್ರಯತ್ನಪೂರ್ವಕ ಹೊರಟು, ಕೆಳಗೆ ಬಂದನು. ತಾತ್ಪರ್ಯವೆಂದರೆ, ಆಗ ಸ್ವಾಮಿಗಳು ತಮ್ಮ ತಪೋಶಕ್ತಿಯ ತೇಜಸ್ಸಿನ ರಕ್ಷಾಕವಚವನ್ನು ಭಾರತದ ಉತ್ತರಸೀಮೆಗೆ ಹಾಕಿದರು ಮತ್ತು ಚೀನದವರ ಆಕ್ರಮಣದ ಭಯದಿಂದ ಮಾತೃಭೂಮಿಯನ್ನು ಮುಕ್ತಗೊಳಿಸಿದರು. ಇದೊಂದು ಅತ್ಯಂತ ದಿವ್ಯ, ಮಹಾನ ಮತ್ತು ಅಲೌಕಿಕ ಕಾರ್ಯವೇ!
ಆ ಸಮಯದಲ್ಲಿ ಶ್ರೀಮನ್ನಾರಾಯಣ ಮಂದಿರದ ಮುಂದಿನ ಕಟ್ಟಡದ ಮೇಲಿನ ಮಾಳಿಗೆಯ ಮೇಲೆ ಸ್ವಾಮಿಗಳ ಏಕಾಂತ ತಪಸ್ಸು ನಡೆದಿತ್ತು. ಸ್ವಾಮಿಗಳ ಸಂಗಡವಿದ್ದ ಶಿಷ್ಯಜನರು ಕೆಳಗಿನ ಮಾಳಿಗೆಯಲ್ಲಿ ಉಳಿದುಕೊಂಡಿದ್ದರು. ಬದರಿಕಾಶ್ರಮದ ಆಗಿನ ವಾಸ್ತವ್ಯದ ಕಾಲಾವಧಿಯಲ್ಲಿ ಸ್ವಾಮಿಗಳು ಲೌಕಿಕ, ಅಲೌಕಿಕ ಸ್ಥರದ ಅನೇಕ ಪ್ರಕಾರದ ಲೋಕೋಪಯೋಗಿ, ಜಗದೋದ್ಧಾರಕ, ಪರೋಪಕಾರಿ ಕಾರ್ಯಗಳನ್ನು ಮಾಡಿದರು. ಅನೇಕ ಅದ್ಭುತ ಘಟನೆಗಳೂ ನಡೆದವು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಮಾಘ, ೧೯೦೧, ಸನ ೧೯೭೯ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img