Memories

40. ಗುರುಕೃಪೆಯಿಂದ ಅಸಾಧ್ಯವೂ ಸಾಧ್ಯ

(ನಿರೂಪಣೆ : ಅನಾಮಧೇಯ ಶ್ರೀಧರಭಕ್ತೆ)

ಶಕೆ ೧೮೮೪ರ ಶ್ರೀದತ್ತಶ್ರೀಧರ ಜನ್ಮೋತ್ಸವಕ್ಕೆಂದು ನಾನು ವರದಪುರಕ್ಕೆ ಹೋಗಿದ್ದೆ. ತಮ್ಮ ಎರಡು ವರ್ಷಗಳ ಏಕಾಂತದ ನಂತರ ಸ್ವಾಮಿಗಳ ದರ್ಶನವಾಗುವದಿತ್ತು. ನಾನು ಒಂದೂವರೆ ತಿಂಗಳು ಮೊದಲು ಮಂಗಳೂರಿನಲ್ಲಿ ಸ್ವಾಮಿಗಳ ದರ್ಶನ ದೂರದಿಂದಲೇ ತೆಗೆದುಕೊಂಡಿದ್ದೆ ಮತ್ತು ಅವರು ಮೌನದಲ್ಲಿ ಇದ್ದುದರಿಂದ ಮಾತೂ ಆಗಿರಲಿಲ್ಲ. ಅದರೊಳಗೆ ನನ್ನ ಪತಿ, ಚೀನಾಗಡಿಗೆ ಯುದ್ಧಕ್ಕೆ ಹೋಗಿದ್ದರಿಂದ ನನ್ನ ಮನಃಸ್ಥಿತಿಯೂ ಅಸ್ವಸ್ಥವಾಗಿತ್ತು. ಸ್ವಾಮಿಗಳ ದರ್ಶನ ಮತ್ತು ಸಂಭಾಷಣೆಗಳಿಂದ ನಮ್ಮ ಮನಸ್ಸು ಶಾಂತವಾಗಬಹುದು ಎಂಬ ಹೇತುವಿನಿಂದಲೇ ನಾನು ವರದಪುರಕ್ಕೆ ಬಂದಿದ್ದೆ. ನನ್ನ ಸಂಗಡ ನನ್ನ ತಂದೆ, ತಂಗಿ ಮತ್ತು ಒಬ್ಬ ಗುರುಬಂಧು ಮಾಮಾ ಕುಲಕರ್ಣಿಯವರೂ ಇದ್ದರು. ವರದಪುರಕ್ಕೆ ಎಲ್ಲಿಂದ ಹೋಗಬೇಕು ಎಂಬುವದರ ಬಗ್ಗೆ ಯೋಗ್ಯ ಮಾಹಿತಿ ಇಲ್ಲದಿರುವದರಿಂದ ನಾವು ಹರಿಹರದ ಮಾರ್ಗದ ಮೇಲಿಂದ ಹೊರಟೆವು. ಹರಿಹರದಲ್ಲಿ ಇಳಿದ ಕೂಡಲೇ ವರದಪುರದ ಬಗ್ಗೆ ವಿಚಾರಿಸುತ್ತಿರುವಾಗಲೇ, ಬೆಳಗಾವಿಯಿಂದ ನಮ್ಮದೇ ಗಾಡಿಯಿಂದ ಬಂದ ಶ್ರೀ ಗಾಡಗೀಳ, ಅವರ ಪತ್ನಿ ಮತ್ತು ಮಗಳು ಅಲ್ಲದೇ, ಶ್ರೀ ಮಾಳಿಯವರ ಭೆಟ್ಟಿಯಾಯಿತು. ಅವರಿಗೂ ವರದಪುರಕ್ಕೆ ಹೋಗುವದಿತ್ತು. ಹರಿಹರದಿಂದ ಶಿವಮೊಗ್ಗಾ ಬಸ್ಸು ಹೊರಡಲು ಇನ್ನೂ ಒಂದು ತಾಸು ಇತ್ತು. ಹಾಗಾಗಿ, ಹರಿಹರದ ಸುಪ್ರಸಿದ್ಧ ಶ್ರೀ ಹರಿಹರ ಮಂದಿರಕ್ಕೆ ಹೋಗಿ ದೇವದರ್ಶನ ಮಾಡಿ ಬಂದೆವು. ಹರಿಹರದಿಂದ ಶಿವಮೊಗ್ಗಾಕ್ಕೆ ಬಂದು, ಅಲ್ಲಿಂದ ಸಾಗರಕ್ಕೆ ಮತ್ತು ಸಾಗರದಿಂದ ವರದಪುರಕ್ಕೆ ಬಂದೆವು. ನಾವು ನಮ್ಮ ಸಾಮಾನುಗಳನ್ನು ತೆಗೆದಿಡುತ್ತಿರುತ್ತಿದ್ದಂತೆಯೇ, ಸ್ವಾಮಿಗಳು ಶ್ರೀ ದುರ್ಗಾಂಬಾ ಮಂದಿರಕ್ಕೆ ಬರುತ್ತಿರುವರೆಂದು ತಿಳಿಯಿತು. ನಾವೆಲ್ಲರೂ ಹತ್ತಿರದಲ್ಲಿರುವ ಕೆರೆಯಲ್ಲಿ ಸ್ನಾನಮಾಡಿ, ಗುರುಮಾಯಿಯ ಚರಣಗಳ ಮೇಲೆ ಮಸ್ತಕವನ್ನಿಟ್ಟು ದರ್ಶನ ತೆಗೆದುಕೊಂಡೆವು ಮತ್ತು ತೀರ್ಥವೂ ಸಿಕ್ಕಿತು. ಸ್ವಾಮಿಗಳ ಮೌನ ನಡೆದೇ ಇತ್ತು. ಮರುದಿನ ಶ್ರೀದತ್ತಶ್ರೀಧರ ಜನ್ಮವೇಳೆಯಲ್ಲಿ ಸ್ವಾಮಿಗಳು ದುರ್ಗಾಂಬಾ ಮಂದಿರದ ದಕ್ಷಿಣ ದಿಕ್ಕಿನ ಚಂದ್ರಶಾಲೆಯಲ್ಲಿ ಇಟ್ಟಿದ್ದ ಶ್ರೀಸಮರ್ಥಪಾದುಕೆಯ ಪಕ್ಕದಲ್ಲಿ ಆಸನಸ್ಥರಾಗುತ್ತಿರುವಾಗ ಗುರುಚರಿತ್ರೆಯಲ್ಲಿನ ದತ್ತಜನ್ಮಾಧ್ಯಾಯ ಓದಿದರು ಮತ್ತು ಅದರ ನಂತರ ಸ್ವಾಮಿಗಳು ಸ್ವಹಸ್ತದಿಂದ ಸಮರ್ಥ ಪಾದುಕೆಯ ಪೂಜೆ ಮಾಡಿದರು. ತದನಂತರ, ಅಷ್ಟಾವಧಾನ ಸೇವೆಯಾದ ಮೇಲೆ ಸ್ವಾಮಿಗಳು, ಮೊದಲು ಸಂಸ್ಕೃತ ನಂತರ ಕನ್ನಡ ಮತ್ತು ಮರಾಠಿಗಳಲ್ಲಿ ಪ್ರವಚನಗಳನ್ನು ಮಾಡಿ, ತಮ್ಮ ಎರಡು ವರ್ಷಗಳ ಮೌನವನ್ನು ಮುರಿದರು. ಈ ಉತ್ಸವದ ಮೂರು – ನಾಲ್ಕು ದಿನಗಳ ಮೊದಲು, ಮಳೆ ತುಂಬಾ ಜೋರಾಗಿ ಆಗಿದ್ದರಿಂದ ಮಂದಿರದ ಆಸುಪಾಸಿನ ಬೈಲು ಇನ್ನೂ ಒದ್ದೆಯಾಗೇ ಇತ್ತು. ನೆಲವನ್ನು ಜೋರಾಗಿ ಕಾಲಿನಿಂದ ಒತ್ತಿದರೆ, ನೆಲದಿಂದ ನೀರು ಒಸರಿಸುತ್ತಿತ್ತು. ಆದರೆ, ಅಂತಹ ನೆಲದ ಮೇಲೆ ಮೂರ್ನಾಲ್ಕು ತಾಸು ಕುಳಿತಿದ್ದರೂ, ಯಾರಿಗೂ ಏನೂ ತೊಂದರೆಯಾಗಲಿಲ್ಲ. ಈ ಭಾಗಕ್ಕೆ ಸ್ವಾಮಿಗಳು ಬಹಳ ವರ್ಷಗಳ ನಂತರ ಬಂದಿದ್ದರಿಂದ ದರ್ಶನಾರ್ಥಿಗಳ ದಟ್ಟಣೆ ತುಂಬಾ ಇತ್ತು ಮತ್ತು ಆ ಜನದಟ್ಟಣೆ ಸತತ ಎಂಟು ದಿನಗಳವರೆಗೂ ಇತ್ತು.

ಸ್ವಾಮಿಗಳು ಸಂಕಷ್ಟಹರ ಚತುರ್ಥಿಯ ದಿನ ನನ್ನ ತಂದೆಯವರಿಗೆ ಅನುಗ್ರಹ ಕೊಟ್ಟರು ಮತ್ತು ರಾತ್ರಿ ಉಪವಾಸ ಬಿಡುವ ಸಮಯಕ್ಕೆ, ಗುರುಮಾತೆಯು ನಮ್ಮೆಲ್ಲರಿಗೂ ತಮ್ಮ ಕೈಯಿಂದ ಬಡಿಸಿದರೆಂಬುದು ನಮ್ಮ ಸೌಭಾಗ್ಯವಲ್ಲದೇ ಇನ್ನೇನು? ಆ ಆನಂದ ಅವರ್ಣನೀಯವೇ! ಪ್ರತಿಯೊಬ್ಬರಿಗೂ ಒತ್ತಾಯ ಮಾಡಿ, ಸ್ವಾಮಿಗಳು ಬಡಿಸುತ್ತಿದ್ದರು. ತಮ್ಮ ಸೊಂಟಕ್ಕೆ ಅಂಗವಸ್ತ್ರವನ್ನು ಕಟ್ಟಿಕೊಂಡು, ಬಡಿಸಲುದ್ಯುಕ್ತರಾಗಿರುವ ಸ್ವಾಮಿಗಳ ಮೂರ್ತಿ ಇಂದೂ ಕಣ್ಮುಂದೆ ಕಟ್ಟಿದಂತಿದೆ. ನಮ್ಮ ಸಂಗಡವಿದ್ದ ಗಾಡಗೀಳರು, ಗುರುವಾರದವರೆಗೆ ಮಾತ್ರ ರಜೆ ತೆಗೆದುಕೊಂಡಿದ್ದರಿಂದ, ಅವರು ಅನುಗ್ರಹ ಕೊಡಲು ಸ್ವಾಮಿಗಳನ್ನು ಬೇಡಿಕೊಂಡರು. ಆದರೆ, ಅವರನ್ನು ಶನಿವಾರದವರೆಗೆ ತಡೆಯಲು ಹೇಳಿ, ಅದರಂತೆ ಶನಿವಾರದ ದಿನ ಅನುಗ್ರಹ ಕೊಟ್ಟ ಮೇಲೆ ಸಾಯಂಕಾಲ ಹೋಗಲು ಸಂಮತಿ ಕೊಟ್ಟರು ಮತ್ತು ಅದರಂತೆ ಅವರು ಹೋದರು. ಅವರು ಸೈನಿಕ ಲೆಕ್ಕಪತ್ರ ವಿಭಾಗದಲ್ಲಿ ಸುಪರಿಟೆಂಡೆಂಟ ಆಗಿ ಕೆಲಸ ಮಾಡುತ್ತಿದ್ದರು. ಅವರ ಮುಂದುವರಿಸಿದ ರಜೆಯ ಬಗ್ಗೆ ಅವರು ಚಿಂತಿತರಾಗಿದ್ದರು. ಅದರಂತೆ, ಶ್ರೀ ಮಾಳಿಯವರ ಮಹಾವಿದ್ಯಾಲಯದ ಪರೀಕ್ಷೆಗಾಗಿ ಅರ್ಜಿ ಹಾಕುವ ಅವಧಿಯೂ ಶನಿವಾರ ಮುಗಿದಿತ್ತು. ಮಾಳಿ ಮತ್ತು ನನ್ನ ತಂಗಿಗೆ ರವಿವಾರ ಅನುಗ್ರಹ ಕೊಟ್ಟರು. ಅದೇ ದಿನ ರಾತ್ರಿ ನಾವು ವರದಪುರದಿಂದ ಸಿರ್ಸಿಗೆ ಬಂದೆವು ಮತ್ತು ಸೋಮವಾರ ಸಂಜೆ ಬೆಳಗಾವಿಗೆ ಬಂದೆವು. ಶ್ರೀ ಗಾಡಗೀಳರ ಮುಂದುವರಿಸಿದ ರಜೆ ಮತ್ತು ಶ್ರೀ ಮಾಳಿಯವರ ಅರ್ಜಿಯ ವಿಷಯಗಳು ಏನಾಗಿರಬೇಕು, ಎಂದು ತಿಳಿದುಕೊಳ್ಳುವ ಉತ್ಸುಕತೆ ಇದ್ದುದರಿಂದ, ನಾವು ಗಾಡಗೀಳರ ಮನೆಗೆ ಹೋದೆವು. ಗಾಡಗೀಳರ ಪತ್ನಿಯವರು, ‘ಮೇಲಿನ ಅಧಿಕಾರಿಯು ರಜೆಯ ಅರ್ಜಿಯನ್ನು ತಮ್ಮಲ್ಲೇ ಹಾಗೆಯೇ ಇಟ್ಟಿಕೊಂಡಿದ್ದರು. ನನ್ನ ಯಜಮಾನರು, ರಜೆಯಿಂದ ತಿರುಗಿ ಬಂದ ಮೇಲೆ, ಆ ಅಧಿಕಾರಿಯು, ನಾಲ್ಕರ ಬದಲು ಏಳು ದಿನಗಳ ರಜೆ ಅರ್ಜಿ ಬರೆಯಿಸಿಕೊಂಡು, ನಂತರ ಮಂಜೂರಿ ಮಾಡಿದರು ಮತ್ತು ಎಲ್ಲ ಸುಖರೂಪ ಮುಗಿಯಿತು’, ಹೀಗೆ ಹೇಳಿದರು. ಇದನ್ನು ಕೇಳಿ ನಮಗೆ ಆನಂದವಾಯಿತು. ನಂತರ ಮಾಳಿಯವರ ಅರ್ಜಿಯ ವಿಷಯದಲ್ಲೇನಾಯಿತೆಂದು ತಿಳಿದುಕೊಳ್ಳಲು, ನಾವು ಮಾಳಿಯವರ ಮನೆಗೆ ಹೋದೆವು. ಅವರು ವರದಪುರದಿಂದ ತಿರುಗಿ ಬರುವಾಗ ನಮ್ಮೊಂದಿಗೇ ಇದ್ದರು. ಅವರು ಮನೆಗೆ ತಲುಪಿದ ಮೇಲೆ ತಮ್ಮ ಪ್ರಾಚಾರ್ಯರನ್ನು ಭೆಟ್ಟಿಯಾಗಲು, ಅವರು, ಮಾಳಿಯವರಿಂದ, ಅರ್ಜಿ ಬರೆಯಿಸಿ, ತೆಗೆದುಕೊಂಡರು. ಅಲ್ಲಿಯವರೆಗೆ, ಅವರು ಉಳಿದ ಅರ್ಜಿಗಳನ್ನೂ ವಿದ್ಯಾಪೀಠಕ್ಕೆ ಕಳುಹಿಸಿರಲಿಲ್ಲ. ಅವರಿಬ್ಬರೂ, ‘ತಮ್ಮ ಕಾರ್ಯವು ಗುರುಮಾಯಿಯ ಕೃಪೆಯಿಂದ, ಏನೊಂದೂ ತೊಂದರೆಯಿಲ್ಲದೇ, ಇಷ್ಟು ಸುಲಭದಲ್ಲಿ ಆಗಿ ಹೋಯಿತು. ಅನ್ಯಥಾ ಹೀಗಾಗುವದು ತುಂಬಾ ಕಷ್ಟವಾಗಿತ್ತು’, ಎಂದು ಉದ್ಗಾರ ಮಾಡಿದರು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’, ಮಾಘ, ೧೯೦೧ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img