Memories

42. ಶಿವಥರಘಳದಲ್ಲಿ ಸ್ವಾಮಿಗಳು ಮೂರ್ತಿಗೆ ದಿವ್ಯದೃಷ್ಟಿಯನ್ನಿತ್ತರು!

(ನಿರೂಪಣೆ : ಶ್ರೀಧರಭಕ್ತ ಕೈ. ಅಪ್ಪಾ ಪಾರಖಿ, ಭೋರ)

ಶ್ರೀಮತ್ ಪ. ಪ. ಭಗವಾನ ಶ್ರೀಧರಸ್ವಾಮಿ ಮಹಾರಾಜರ ಪ್ರಥಮದರ್ಶನ ಶ್ರೀಕ್ಷೇತ್ರ ಸುಂದರಮಠದಲ್ಲಿ (ಶಿವಥರಘಳ) ಇಸವಿ ಸನ ೧೯೬೦ರಲ್ಲಿ ಆಯಿತು. ಅಲ್ಲಿ ‘ಶ್ರೀ ಸಮರ್ಥ ದಾಸಬೋಧ ಹೇಳುತ್ತಿರುವ ಮತ್ತು ಯೋಗಿರಾಜ ಕಲ್ಯಾಣಸ್ವಾಮಿ ಬರೆಯುತ್ತಿರುವ’, ರೀತಿಯ ಮೂರ್ತಿಗಳ ಪ್ರಾಣಪ್ರತಿಷ್ಠೆಯನ್ನು ಸ್ವಾಮಿಗಳ ವರದಹಸ್ತದಿಂದ ಮಾಡಬೇಕೆಂಬ ಯೋಜನೆಯಂತೆ ಸ್ವಾಮಿಗಳನ್ನು ವಿನಂತಿಸಿ, ಅವರ ಒಪ್ಪಿಗೆ ಪಡೆದು, ಮಾಘ ಶುದ್ಧ ೬, ಶಕೆ ೧೮೮೧ ರಾತ್ರಿ ಮಹಾರಾಜರನ್ನು ಮೆರವಣಿಗೆಯಲ್ಲಿ ಮಾಝರಿಯಿಂದ ಶಿವಥರಘಳಕ್ಕೆ ಕರೆದುಕೊಂಡು ಬಂದರು. ಸುಂದರಮಠದೊಳಗೆ ತಲುಪಿದಂತೆಯೇ ಸ್ವಾಮಿಗಳು, ನಾನು ಕೂಡಿಸಿದ, ಶ್ರೀ ಮಾರುತಿರಾಯ, ಶ್ರೀ ಸಮರ್ಥ ಮತ್ತು ಶ್ರೀ ಕಲ್ಯಾಣಸ್ವಾಮಿಗಳ ಮೂರ್ತಿಗಳ ಆಸನ ಮತ್ತು ಸ್ಥಾನ ವ್ಯವಸ್ಥೆಗಳನ್ನು ನೋಡಿ, ನನ್ನ ಬೆನ್ನು ಸವರುತ್ತ, ‘ಮಗಾ! ಮೂರ್ತಿಗಳ ಈ ಆಸನ ವ್ಯವಸ್ಥೆ ಸರಿಯಿಲ್ಲ’, ಎಂದು ಹೇಳಿದರು. ನಂತರ ಸ್ವಾಮಿಗಳು, ಆ ಮೂರ್ತಿಗಳನ್ನು ಸರಿಯಾಗಿ (ಈಗ ಹೇಗಿದೆಯೋ ಆ ರೀತಿಯ ವ್ಯವಸ್ಥೆಯಲ್ಲಿ) ಕೂಡಿಸಲು ಅಪ್ಪಣೆ ಮಾಡಿದರು ಮತ್ತು ಅದರಂತೆ, ರಾತ್ರಿಯಿಡೀ ಬಡಿಗ ಮತ್ತು ಗಾರೆ ಕೆಲಸದವರನ್ನು ಕೆಲಸಕ್ಕೆ ಹಚ್ಚಿ, ಸ್ವಾಮಿಗಳ ನಿರ್ದೇಶದಂತೆ ಆ ಮೂರೂ ಮೂರ್ತಿಗಳ ಸ್ಥಾನ ಮತ್ತು ಆಸನಗಳ ವ್ಯವಸ್ಥೆಯನ್ನು ರಚಿಸಲಾಯಿತು.

ಮಾಘ ಶುದ್ಧ ೯, ದಾಸಬೋಧ ನವಮಿಗೆ ಅಲ್ಲಿ ಹವನ ಮತ್ತು ಮಹಾಪ್ರಸಾದದ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿತ್ತು ಮತ್ತು ಆ ಉತ್ಸವ ನೋಡಲು ಸುತ್ತ ಮುತ್ತಲಿನ ಹತ್ತು ಹದಿನೈದು ಹಳ್ಳಿಗಳ ಜನರು ಬಂದಿದ್ದರು. ಮೂರ್ತಿಗಳ ನೇತ್ರೋನ್ಮಿಲನ ಮಾಡಲಿಕ್ಕೆ ಸ್ವಾಮಿಗಳು ಮೊದಲು ಶ್ರೀಸಮರ್ಥರ ಕಣ್ಣುಗಳಿಗೆ ಬೆಣ್ಣೆ ಹಚ್ಚಿ ಅದರ ಮೇಲೆ ಸುಮಾರು ಹದಿನೈದು ನಿಮಿಷ ತಮ್ಮ ಅಂಗೈಯನ್ನು ಇಟ್ಟರು. ಆ ಕೈ ತೆಗೆದ ಮೇಲೆ, ನನಗೆ ಶ್ರೀಸಮರ್ಥರ ಯಾವ ದರ್ಶನವಾಯಿತೋ, ಅದು ಸಜೀವ ಮನುಷ್ಯರ ಕಣ್ಣಿನ ತೇಜಸ್ಸಿಗಿಂತಲೂ ದಿವ್ಯವಾಗಿತ್ತು. ನಂತರ, ಬಲಭಾಗದಲ್ಲಿದ್ದ ಕಲ್ಯಾಣಸ್ವಾಮಿಗಳ ಕಣ್ಣುಗಳಿಗೆ ಬೆಣ್ಣೆ ಹಚ್ಚಿ ಮೊದಲಿನಂತೆ ಅಂಗೈಯಿಟ್ಟರು ಮತ್ತು ಸ್ವಾಮಿಗಳು ಕೈ ತೆಗೆದ ಮೇಲೆ ಅದೇ ರೀತಿಯ ದಿವ್ಯದೃಷ್ಟಿ ಅಲ್ಲಿಯೂ ಕಾಣಿಸಿತು. ಇವನ್ನೆಲ್ಲ ಕಣ್ಣಾರೆ ಕಂಡು, ಸ್ವಾಮಿಗಳ ‘ಭಗವಾನ’ ಎಂಬ ಬಿರುದಾವಳಿ ಏನೆಂದು ನನಗೆ ಅರ್ಥವಾಯಿತು ಮತ್ತು ಸ್ವಾಮಿಗಳ ಮೇಲೆ ಭಕ್ತಿ, ಆದರ ನಿರ್ಮಾಣವಾಯಿತು.

ಮುಂದೆ, ವರದಹಳ್ಳಿಯಲ್ಲಿ ಸ್ವಾಮಿಗಳ ಅನುಗ್ರಹ ಪಡೆಯುವ ಭಾಗ್ಯ ನನಗೆ ಸಿಕ್ಕಿತು. ಆಗಂತೂ ಅವರ ಪರಮ ದಿವ್ಯ ಶಕ್ತಿಯ ಸ್ವಾನುಭವವನ್ನು ನಾನು ಪಡೆದೆನು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಫಾಲ್ಗುಣ, ೧೯೦೧ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img