Memories

43. ಕಾಗದದ ಮುಕುಟ

(ನಿರೂಪಣೆ : ಅನಾಮಧೇಯ ಶ್ರೀಧರಭಕ್ತ)

ಶಕೆ ೧೮೮೬ರ ಮಾರ್ಗಶೀರ್ಷ ವದ್ಯ, ಇಸವಿ ಸನ ೧೯೬೭
ಆ ಸಮಯದಲ್ಲಿ ಸ್ವಾಮಿಗಳು ತಮ್ಮ ಹೋಶಂಗಾಬಾದದ ಚಾತುರ್ಮಾಸ ಮುಗಿಸಿ, ನಾಗಪುರ ಮಾರ್ಗದಿಂದ ಮುಂಬಾಯಿ ಮತ್ತು ನಂತರ ಸಜ್ಜನಗಡಕ್ಕೆ ಬಂದಿದ್ದರು. ಇದು ಸ್ವಾಮಿಗಳ ಸಜ್ಜನಗಡದಲ್ಲಿನ ಕೊನೆಯ ವಾಸ್ತವ್ಯವಾಯಿತು. ಅವರ ಆ ವಾಸ್ತವ್ಯದ ವೇಳೆ ದಿನ ರಾತ್ರಿ ಅದೆಷ್ಟು ಜನದಟ್ಟಣೆ ಆಗಿತ್ತೆಂದರೆ, ಅವರಿಗೆ ೩-೪ ತಾಸಿಗಿಂತಲೂ ಹೆಚ್ಚಿನ ವಿಶ್ರಾಂತಿ ಸಿಗುತ್ತಿರಲಿಲ್ಲ. ಅಷ್ಟಲ್ಲದೇ ಸ್ವಾಮಿಗಳಿಗೆ ತುಂಬಾ ನೆಗಡಿ ಶೀತವಾಗಿತ್ತು.
ಒಂದು ರಾತ್ರಿ ಮಲಗುವಾಗ ಸ್ವಾಮಿಗಳು ಇಂಗ್ಲಿಷ ವರ್ತಮಾನ ಪತ್ರದ ಮುಕುಟ ಮಾಡಿ ತಮ್ಮ ತಲೆಗೆ ಗಟ್ಟಿಯಾಗಿ ಕೂರಿಸಿದರು ಮತ್ತು ಅದರ ಮೇಲೆ ತಮ್ಮ ಅಂಗವಸ್ತ್ರವನ್ನು ಎಳೆ ಎಳೆದು ಗಟ್ಟಿಯಾಗಿ ಸುತ್ತಿದರು. ನಾನು, ‘ಸ್ವಾಮಿಗಳು ಇದೇನು ಮಾಡುತ್ತಿದ್ದಾರೆ?’ ಎಂದು ವಿಚಾರ ಮಾಡುತ್ತಿದ್ದೆ. ಆದರೆ, ಬೆಳಿಗ್ಗೆ ಸ್ವಾಮಿಗಳೇ ನನ್ನ ಸಂಶಯ ನಿವಾರಣೆ ಮಾಡಿದರು. ಅವರು ಬೆಳಗು ಹರಿಯುವ ಮೊದಲೇ ಸ್ನಾನಕ್ಕೆ ಹೋಗುವ ಮೊದಲು, ತಲೆಗೆ ಕಟ್ಟಿದ್ದ ಅಂಗವಸ್ತ್ರ ತೆಗೆದು, ಆ ಕಾಗದದ ಮುಕುಟ ತೆಗೆದು ಹಾಕಿದರು. ನಾನು ಅದನ್ನು ನೋಡುತ್ತಿದ್ದದ್ದು ನೋಡಿದ ಸ್ವಾಮಿಗಳು, ‘ಮನುಷ್ಯನಿಗೆ ಬಹಳ ಶೀತವಾಗಿದ್ದರೆ, ಕರ್ನಾಟಕದಲ್ಲಿ ತಲೆಗೆ ಇಂಗ್ಲೀಷ ವರ್ತಮಾನ ಪತ್ರದ ಕಾಗದದಿಂದ ಹೀಗೇ ಮುಕುಟ ಮಾಡಿ ಹಾಕಿಕೊಳ್ಳುತ್ತಾರೆ ಮತ್ತು ಅದರ ಮೇಲೆ ಅಂಗವಸ್ತ್ರ ಗಟ್ಟಿಯಾಗಿ ಕಟ್ಟುತ್ತಾರೆ. ಅದರಿಂದ ನೆಗಡಿ ಕಡಿಮೆಯಾಗುತ್ತದೆ. ಅದೇ ಉಪಚಾರ ನಾನು ಮಾಡಿದೆ. ನಿನಗೆ ಇದರ ಆಶ್ಚರ್ಯವೆನಿಸಿದ್ದು ನನ್ನ ಲಕ್ಷಕ್ಕೆ ಬಂದಿದ್ದರಿಂದಲೇ ನಿನಗಿದನ್ನು ಹೇಳಿದೆ. ಇದೊಂದು ಸಾದಾ, ಸುಲಭ ಉಪಾಯ’ ಎಂದು ನನಗೆ ಹೇಳಿದರು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಫಾಲ್ಗುಣ, ೧೯೦೧ ಇಸವಿ ಸನ ೧೯೭೯ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img