Memories

45. ಸ್ವಾಮಿಗಳು ಮತ್ತು ಶ್ರೀಮತ್ ಗುಳವಣಿ ಮಹಾರಾಜರ ದಿವ್ಯಸಂಗಮ – ಭಾಗ ೧, ಪ್ರಥಮ ಸಮಾಗಮ

(ನಿರೂಪಣೆ : ಶ್ರೀಧರ ವರಶಿಷ್ಯ ಪೃಥ್ವೀರಾಜ ಭಾಲೇರಾವ ‘ಪರಮಾರ್ಥ’, ಡಿಸೆಂಬರ ಇಸವಿ ಸನ ೧೯೮೦ ರಿಂದ ಸಂಕಲಿತ)

||ಶ್ರೀರಾಮ ಸಮರ್ಥ||

ಇಸವಿ ಸನ ೧೯೫೭ರ ಮಧ್ಯೆ ಕಾಶಿಯಿಂದ ಶ್ರೀ ಸ್ವಾಮಿಗಳು ವಿಶ್ರಾಂತಿಗಾಗಿ ಕೆಲ ದಿನ ಲೋಣಾವಳಾದಲ್ಲಿ ನಮ್ಮ ಬಂಗಲೆಯಲ್ಲಿ ಉಳಿದುಕೊಳ್ಳುವರೆಂದು ತಾರಿನಿಂದ ನನಗೆ ತಿಳಿಸಲಾಯಿತು ಮತ್ತು ಅದರಂತೆ ನಾನು ತಯಾರಿಗೆ ಹತ್ತಿದೆ. ಪುಣೆಯಲ್ಲಿ ಗುಳವಣಿ ಮಹಾರಾಜರ ಮತ್ತು ನನ್ನ ಸಂಪರ್ಕ ಮತ್ತು ಸಂಬಂಧವಾಗಿತ್ತು ಮತ್ತು ನಾನು ಅವರಿಗೆ ಲೋಣಾವಳಕ್ಕೆ ಬರಲು ಆಮಂತ್ರಿಸಿದೆ. ಅವರಿಗೆ ವಯೋಮಾನಾನುಸಾರ ಪ್ರೋಸ್ಟೇಟ ಗ್ರಂಥಿಯ ತೊಂದರೆ, ಅದಾಗಲೇ ಬಾಧಿಸುತ್ತಿರುವದರಿಂದ, ಪುಣೆಯ ಹೊರಗೆ ಹೋಗಲು ಅವರ ಚಿಕಿತ್ಸಕರ ಒಪ್ಪಿಗೆ ಇಲ್ಲವಾಗಿತ್ತು. ನನ್ನ ಆಮಂತ್ರಣಕ್ಕೆ ಅವರು ಅಷ್ಟು ಪ್ರತಿಸಾದವನ್ನೂ ಕೊಡಲಿಲ್ಲ. ಮರುದಿನವೇ ಸ್ವಾಮಿಗಳ ಸವಾರಿ ತಮ್ಮ ಶಿಷ್ಯವರ್ಗದೊಂದಿಗೆ ಬಂದು ತಲುಪಿತು ಮತ್ತು ಒಂದೆರಡು ದಿನಗಳೂ ಆಗಿಲ್ಲ, ಸ್ವಾಮಿಗಳ ದರ್ಶನಾರ್ಥಿಗಳ ದಟ್ಟಣೆ ಪ್ರಾರಂಭವಾಯಿತು.

ಒಂದು ದಿನ ಸೂರ್ಯೋದಯದ ಕಾಲದಲ್ಲಿ ನಮ್ಮ ಗೇಟಿನ ಮುಂದೆ ೫ – ೬ ಗಾಡಿಗಳು ಸಾಲಾಗಿ ಬಂದು ನಿಂತವು ಮತ್ತು ಅದರ ಮೊದಲನೆಯ ಗಾಡಿಯಿಂದಲೇ ಶ್ರೀ ಗುಳವಣಿ ಮಹಾರಾಜ ಇಳಿಯುತ್ತಿದ್ದುದು ಕಾಣಿಸಿತು. ನನಗೆ ತುಂಬಾ ಆನಂದವೆನಿಸಿ, ನಾನೂ ಅವರ ಮುಂದೆ ಹೋಗಿ, ಅವರ ಹಾರ್ದಿಕ ಸ್ವಾಗತ ಮಾಡಿದೆನು. ನಂತರ ಅವರನ್ನು ಒಂದು ಕೋಣೆಯಲ್ಲಿ ಕುಳ್ಳಿರಿಸಿ, ಅವರು ಬಂದ ವಿಷಯವನ್ನು ಸ್ವಾಮಿಗಳಿಗೆ ತಿಳಿಸಿದೆ. ಗುಳವಣಿ ಮಹಾರಾಜರು ಬಂದ ವಿಷಯ ತಿಳಿದಕೂಡಲೇ, ಸ್ವಾಮಿಗಳು ಓಡುತ್ತಲೇ ಆ ಕೋಣೆಗೆ ಬಂದರು ಮತ್ತು ಅವರಿಗೆ ಪ್ರೇಮಾಲಿಂಗನ ಮಾಡಿದರು. ಆಗ ಮಹಾರಾಜರು, ಸ್ವಾಮಿಗಳ ಅಪ್ಪುಗೆಯಿಂದ ತಮ್ಮನ್ನು ಬಿಡಿಸಿಕೊಂಡು, ಸ್ವಾಮಿಗಳ ಚರಣಗಳ ಮೇಲೆ ಭಕ್ತಿಪೂರ್ವಕವಾಗಿ ತಮ್ಮ ಮಸ್ತಕವನ್ನಿಟ್ಟರು. ಸ್ವಾಮಿಗಳು ಅವರನ್ನು ಎಬ್ಬಿಸಿದರು ಮತ್ತು ಸ್ವತಃ ಒಂದು ಖುರ್ಚಿಯ ಮೇಲೆ ಕುಳಿತು, ಬದಿಯ ಖುರ್ಚಿಯ ಮೇಲೆ ಕುಳಿತುಕೊಳ್ಳಲು ಮಹಾರಾಜರಿಗೆ ಹೇಳದರು. ಆದರೆ, ಮಹಾರಾಜರು ವಿನಯತೆಯಿಂದ ಕೆಳಗೇ ಕುಳಿತರು. ಅದನ್ನು ನೋಡಿ, ಸ್ವಾಮಿಗಳು ಒಂದು ಮಣೆ ತರಿಸಿ, ಮಹಾರಾಜರು, ‘ಬೇಡ, ಬೇಡ’, ಹೇಳುತ್ತಿದ್ದರೂ, ಅವರನ್ನು ಸ್ವಹಸ್ತದಿಂದ ಮಣೆಯ ಮೇಲೆ ಕೂರಿಸಿದರು. ಆವಾಗ ಸ್ವಾಮಿಗಳ ಸುತ್ತುಮುತ್ತಲೂ ಕನ್ನಡ ಭಕ್ತಜನರೇ ಹೆಚ್ಚಾಗಿ ಇದ್ದರು. ಸ್ವಾಮಿಗಳು ಮಹಾರಾಜರ ಪ್ರಕೃತಿಯ ಬಗ್ಗೆ ವಿಚಾರಿಸಿ, ಬುಟ್ಟಿ ತುಂಬ ಹಣ್ಣು ಹಂಪಲಗಳ ಪ್ರಸಾದವನ್ನು ಅಭಿಮಂತ್ರಸಿ ಕೊಟ್ಟರು ಮತ್ತು ‘ಪ್ರತಿವರ್ಷ ತುಳಜಾ ಭವಾನಿಯ ಮಹಾಪೂಜೆ ಮಾಡುತ್ತಾ ಇರಿ’ ಎಂದು ಆದೇಶ ಮಾಡಿದರು. (ಈ ಮಹಾಪೂಜೆ ಇಂದಿಗೂ ನಡೆದಿದೆ.) ನಂತರ ೧೫ – ೨೦ ನಿಮಿಷ ಏಕಾಂತದಲ್ಲಿ, ಸ್ವಾಮಿಗಳ ಮತ್ತು ಮಹಾರಾಜರ ಕೆಲವು ಮಾತುಕತೆಗಳಾದವು ಮತ್ತು ನನಗೆ ಒಳಗೆ ಕರೆದು ಗುಳವಣಿ ಮಹಾರಾಜರ ವ್ಯವಸ್ಥೆ ಚೆನ್ನಾಗಿ ಮಾಡಲು ಹೇಳಿದರು. ಮಹಾರಾಜರು ಬೀಳ್ಕೊಳ್ಳುವಾಗ ಸ್ವಾಮಿಗಳಿಗೆ ಮತ್ತೆ ನಮಸ್ಕಾರ ಮಾಡಿದರು. ಆಗ ಸ್ವಾಮಿಗಳು ಮಹಾರಾಜರನ್ನು ಪುನಃ ಅಪ್ಪಿಕೊಂಡು ಅವರ ಕಿವಿಯಲ್ಲಿ ಏನೋ ಪಿಸುಮಾತು ಹೇಳಿದರು ಮತ್ತು ಅಭಯಮುದ್ರೆ ತೋರಿಸುತ್ತ ಬೀಳ್ಕೊಟ್ಟರು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಚೈತ್ರ ೧೯೦೩, (ಇಸವಿ ಸನ ೧೯೮೧), ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img