Memories

47. ಸ್ವಾಮಿಗಳು ಮತ್ತು ಶ್ರೀಮತ್ ಗುಳವಣಿ ಮಹಾರಾಜರ ದಿವ್ಯಸಂಗಮ – ಭಾಗ ೩, ‘ಸ್ವಾಮಿಗಳ ದರ್ಶನದ ಒಂದೇ ಒಂದು ಸಂಧಿಯನ್ನೂ ನಾನು ತಪ್ಪಿಸಿಕೊಳ್ಳುವದಿಲ್ಲ’, ಎಂಬ ಮಾತನ್ನು ಅಕ್ಷರಶಃ ಪಾಲಿಸಿದರು

(ನಿರೂಪಣೆ : ಶ್ರೀಧರ ವರಶಿಷ್ಯ ಪೃಥ್ವೀರಾಜ ಭಾಲೇರಾವ ‘ಪರಮಾರ್ಥ’, ಡಿಸೆಂಬರ ಇಸವಿ ಸನ ೧೯೮೦ ರಿಂದ ಸಂಕಲಿತ)

‘ಪುಣೆಯ ಸುತ್ತಮುತ್ತ ಸ್ವಾಮಿದರ್ಶನದ ಒಂದೇ ಒಂದು ಸಂಧಿಯನ್ನೂ ತಪ್ಪಿಸಿಕೊಳ್ಳುವದಿಲ್ಲ’, ಎಂಬ ಯಾವ ಉದ್ಗಾರವನ್ನು ಗುಳವಣಿ ಮಹಾರಾಜರು, ಶ್ರೀಧರ ಸ್ವಾಮಿಗಳ ಪ್ರಥಮ ದರ್ಶನದ ಕೊನೆಯಲ್ಲಿ ತೆಗೆದಿದ್ದರೋ ಅದಕ್ಕನುರೂಪವಾಗಿ ಕೊನೆಯವರೆಗೂ ನಡೆದರು! ಆ ಎಲ್ಲ ಸಮಾಗಮಗಳ ವಿವರ ಮತ್ತು ವೈಶಿಷ್ಟ್ಯಗಳನ್ನು ಬರೆಯುವದು ಸ್ವತಂತ್ರ ಲೇಖನದ ವಸ್ತುವೇ ಆಗಿರುವದರಿಂದ, ಕೇವಲ ಸಂಕ್ಷಿಪ್ತವಾಗಿ ಇಲ್ಲಿ ಟಿಪ್ಪಣಿಸಿದ್ದೇನೆ.

ಸಜ್ಜನಗಡದಲ್ಲಿ ಏಕಾಂತವಾಸದಲ್ಲಿದ್ದ ಸ್ವಾಮಿಗಳ ದೇಹಪ್ರಕೃತಿ, ಎಪ್ರಿಲ, ೧೯೬೨ರ ಮಧ್ಯೆ ಒಮ್ಮಿಂದೊಮ್ಮಲೇ ಕೆಟ್ಟು, ಗಂಭೀರ ನೋವು ಬಾಧಿಸಹತ್ತಿತು. ಆದುದರಿಂದ, ಅವರನ್ನು ಪುಣೆಯಲ್ಲಿದ್ದ ನಮ್ಮ ಬಂಗಲೆಗೆ ಕರೆದುಕೊಂಡು ಬರಬೇಕಾಯಿತು. ಸ್ವಾಮಿಗಳು ಪುಣೆಯಲ್ಲಿ ಬಂದಿರುವ ಈ ಸುದ್ದಿ ತಕ್ಷಣ ಎಲ್ಲೆಡೆ ಪಸರಿಸಿತು. ಆ ಸಮಯದಲ್ಲಿ ಸ್ವಾಮಿಗಳ ಪುಣೆಯ ವಾಸ್ತವ್ಯ ಸುಮಾರು ಒಂದೂಮುಕ್ಕಾಲು ತಿಂಗಳೇ ಆಯಿತು. ಆದರೆ, ಪ್ರಾರಂಭದ ಹದಿನೈದು ದಿನಗಳು ಅತ್ಯಂತ ಜಾಗರೂಕತೆಯ ದಿನಗಳಾಗಿದ್ದವು. ತದನಂತರ ಮಾತ್ರ ಸ್ವಾಮಿಗಳ ಪ್ರಕೃತಿ ಸಾವಕಾಶವಾಗಿ ಸುಧಾರಿಸಹತ್ತಿತು ಮತ್ತು ನಂತರ ಮೊದಲಿನಂತೆ ಉತ್ತಮಗೊಂಡಿತು. ಈ ಎಲ್ಲ ಕಾಲದಲ್ಲಿ, ಶ್ರೀ ಗುಳವಣಿ ಮಹಾರಾಜರು ಶ್ರೀಧರ ಸ್ವಾಮಿಗಳ ದರ್ಶನಾರ್ಥ ಪ್ರತಿದಿನ, ತಪ್ಪದೇ ಬರುತ್ತಿದ್ದುದರಲ್ಲಡಗಿರುವ, ಅವರ ಭಾವನೆ, ನಿಯಮ ಪಾಲನೆ ಮತ್ತು ಶಿಸ್ತು ಈ ಎಲ್ಲವುಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಆಗುತ್ತದೆ. ಮೂರನೇ ಪ್ರಹರ, ಸರಿಯಾಗಿ ನಾಲ್ಕು ಬಡಿಯುವಾಗ ಅವರು ಬರುತ್ತಿದ್ದರು. ಬಂದವರೇ ಕೈಕಾಲು ಮುಖ ತೊಳೆದು ಮತ್ತು ಮೈಮೇಲಿನ ವಸ್ತ್ರ ತೆಗೆದು ಹಾಕಿ ಸ್ವಾಮಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದರು. ಅದರ ನಂತರ ಸ್ವಾಮಿಗಳ ಚರಣಗಳ ಹತ್ತಿರ ಧ್ಯಾನಸ್ಥರಾಗಿ ಕುಳಿತಿರುತ್ತಿದ್ದರು. ಐದು ಬಡಿದ ಮೇಲೆ ಪುನಃ ದಂಡವತ ಪ್ರಣಾಮ ಮಾಡಿ, ಮತ್ತೆ ಸ್ವಾಮಿಗಳ ನಿರೋಪ ತೆಗೆದುಕೊಳದಳುತ್ತಿದ್ದರು. ಆಶ್ಚರ್ಯವೆಂದರೆ ಅವರ ಈ ನಿತ್ಯ ಕಾರ್ಯಕ್ರಮವನ್ನು ಒಂದು ದಿನವೂ ಮುರಿಯಲಿಲ್ಲ! ಒಂದು ದಿನವೂ ಸ್ವಾಮಿದರ್ಶನವನ್ನು ತಪ್ಪಿಸಿಕೊಳ್ಳಲಿಲ್ಲ. ಇದು ಗುಳವಣಿ ಮಹಾರಾಜರ ಸ್ವಾಮಿಗಳ ಮೇಲಿನ ಭಕ್ತಿ, ಶ್ರದ್ಧೆ!

ಮುಂದೆ, ಇಸವಿ ಸನ ೧೯೬೫ರಲ್ಲಿ ಸ್ವಾಮಿಗಳು ಬದರೀನಾರಾಯಣಕ್ಕೆ ಹೋಗಲು, ಪುಣೆಯಿಂದ ಹೊರಟರು. ಆಗ ಶ್ರೀ ಗುಳವಣಿ ಮಹಾರಾಜರ ಹೊಸ ಮಠ ‘ವಾಸುದೇವ ನಿವಾಸ ಯೋಗಾಶ್ರಮ’ ಆಗಮಾತ್ರ ಕಟ್ಟಿ ಮುಗಿದಿತ್ತು ಮತ್ತು ಮಹಾರಾಜರು ಅಲ್ಲಿ ಉಳಿದುಕೊಳ್ಳಲಿಕ್ಕೆ ಹೋಗಿದ್ದರು. ಆಗ ಸ್ವಾಮಿಗಳ ಚರಣಸ್ಪರ್ಷ ಅಲ್ಲಿ ಆಗಬೇಕೆಂದು ಮಹಾರಾಜರು, ತುಂಬಾ ಆಗ್ರಹಮಾಡಿ ಸ್ವಾಮಿಗಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ, ಅವರ ಪಾದಪೂಜೆಯನ್ನು ಪರಮ ಭಕ್ತಿಭಾವದಿಂದ ಮತ್ತು ವೈಭವದಿಂದ ಮಾಡಿದರು. ಆ ಪ್ರಸಂಗದ ಬಣ್ಣದ ಪಟಗಳನ್ನು ಆ ಆಶ್ರಮದಲ್ಲಿ ಅಗ್ರಭಾಗದಲ್ಲಿ ಇಟ್ಟಿದ್ದು ಅಲ್ಲಿ ಇಂದಿಗೂ ಕಾಣಸಿಗುತ್ತದೆ!

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಚೈತ್ರ ೧೯೦೩, (ಇಸವಿ ಸನ ೧೯೮೧), ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img