Memories

51. ಸಾಮಾನ್ಯ ಹಳ್ಳಿಗನೊಬ್ಬನ ಜೀವನೋದ್ಧಾರ

(ನಿರೂಪಣೆ : ಶ್ರೀಧರಭಕ್ತೆ ಕು. ಲೀಲಾತಾಯಿ ಪೂಜಾರಿ)

ಸ್ವಾಮಿಗಳ ವಾಸ್ತವ್ಯ ಆಗ ಮಹಾಬಳೇಶ್ವರದಲ್ಲಿತ್ತು. ಸ್ವಾಮಿಗಳು ಪ್ರತಿದಿನ ಬೆಳಿಗ್ಗೆ ಕೆಲ ಸಮಯ ಓಡುವ ಪರಿಪಾಠ ಪಾಲಿಸುತ್ತಿದ್ದರು. ಒಮ್ಮೆ ಎಂದಿನಂತೆ ಓಟ ಮುಗಿಸಿ, ತಿರುಗಿ ಬರುತ್ತಿರುವಾಗ, ಸ್ಟ್ರೋಬೆರಿಯ ಹಣ್ಣುಗಳ ಬುಟ್ಟಿ ತುಂಬಿಕೊಂಡು ಮಾರಲಿಕ್ಕೆ ಹೊರಟ ಒಬ್ಬ ಹಳ್ಳಿಗ ಸ್ವಾಮಿಗಳಿಗೆ ಸಿಕ್ಕನು. ಸ್ಟ್ರೋಬೆರಿ ಹಿಪ್ಪನೇರಿಳೆನಂತಹದೇ ಹಣ್ಣಾಗಿದ್ದು, ಅದು ಮಾಥೇರಾನ, ಮಹಾಬಳೇಶ್ವರ ಮೊದಲಾದ ಎತ್ತರದ ತಂಪು ಹವೆಯ ಸ್ಥಳಗಳಲ್ಲಿಯೇ ಕಾಣಸಿಗುತ್ತದೆ. ಆ ಹಳ್ಳಿಗನಿಗೆ, ಸ್ವಾಮಿಯವರು, ’ಏನಪ್ಪಾ! ಹಣ್ಣಿನ ಬುಟ್ಟಿ ಎಷ್ಟಕ್ಕೆ ಕೊಡುತ್ತೀಯೆ?’ ಎಂದು ಕೇಳಿದಕ್ಕೆ, ಆತನು, ‘ನೀನು ಎಷ್ಟಕ್ಕೆ ತೆಗೆದುಕೊಳ್ಳುತ್ತೀ?’ ಎಂದು ಪ್ರತಿಪ್ರಶ್ನೆಯನ್ನೇ ಮಾಡಿದನು. ಸ್ವಾಮಿಗಳು, ‘ಅಪ್ಪಾ! ನಿನ್ನ ಅಂದಾಜಾದರೂ ತಿಳಿಯಲಿ! ನಂತರ ಹೆಚ್ಚು ಕಡಿಮೆ ಮಾಡಬಹುದು’, ಎಂದು ಹೇಳಲು, ಆ ಹಳ್ಳಿಗನು, ‘ನಾನು ಇಡೀ ಬುಟ್ಟಿಗೆ ಎಂಟು ರೂಪಾಯಿ ತೆಗೆದುಕೊಳ್ಳುತ್ತೇನೆ’, ಎಂದು ಹೇಳಿದನು. ಹಳ್ಳಿಗನು ತನ್ನ ಮನಸ್ಸಿನಲ್ಲಿ, ‘ಇವನು ಲಂಗೋಟಿ ಉಟ್ಟಿದ್ದಾನೆ. ಬಿಸಿಲು ತಾಗಬಾರದೆಂದು ತುಂಡು ಪಂಜೆ ತಲೆಯಮೇಲೆ ಇಟ್ಟಿದ್ದಾನೆ. ಇವನೇನು ಸೂಟಬೂಟಿನವನಲ್ಲ. ಇವನೇನು ಎಲ್ಲಿಯ ಎಂಟು ರೂಪಾಯಿ ಕೊಡುತ್ತಾನೆ?’ ಎಂದು ವಿಚಾರ ಮಾಡುತ್ತಿದ್ದನು. ಆದರೆ ಸ್ವಾಮಿಗಳು, ‘ಒಳ್ಳೇದು! ಎಂಟಾದರೆ ಎಂಟು. ನನ್ನ ಬಂಗಲೆಯವರೆಗೆ ತೆಗೆದುಕೊಂಡು ಬಂದರೆ, ನಿನಗೆ ಹತ್ತು ರೂಪಾಯಿ ಕೊಡುತ್ತೇನೆ’, ಎಂದು ಹೇಳಿದರು. ಆಗ ಅವನಿಗೆ ಸ್ವಾಮಿಗಳ ಬಗ್ಗೆ ಅರಿವಿರದ್ದರಿಂದ, ‘ಸಾಮಾನ್ಯ ಜನರು, ಎಂಟು ಎಂದು ಹೇಳಿದರೆ, ಆರು ರೂಪಾಯಿಗೆ ಕೇಳುತ್ತಾರೆ. ಇದು ನನ್ನ ದಿನನಿತ್ಯದ ಅನುಭವ. ಇಂದು ಮಾತ್ರ ಎಂಟಾದರೆ ಎಂಟು ಮತ್ತು ಅದರ ಮೇಲೆ ಎರಡು ರೂಪಾಯಿ ಹೆಚ್ಚಿಸಿದ್ದಾರೆ, ಎಂದರೆ ಒಂದೇ ಇವರು ಸಿಟ್ಟಾಗಿ ಹೇಳಿರಬೇಕು, ಇಲ್ಲಾ ಅಂದರೆ ಏನೂ ವ್ಯವಹಾರದ ಅರಿವೇ ಇಲ್ಲದವರಿರಬೇಕು’, ಎಂದು ಅನಿಸಿಕೊಂಡಿರಬೇಕು. ವ್ಯವಹಾರ ಬುದ್ಧಿಯ ಸಾಮಾನ್ಯ ಮನುಷ್ಯರಿಗೆ ಮಹಾತ್ಮರ ಘನತೆಯ ಅರಿವೆಂತು ಆದೀತು? ಆತನು ತನ್ನ ವ್ಯವಹಾರ ಬುದ್ಧಿಯನ್ನು ಮುಂದುವರಿಸುತ್ತ, ‘ಒಳ್ಳೇದು! ಆದರೆ, ಇದು ನೋಡಿ. ನಿಮ್ಮ ಹೆಂಡತಿ ಮಕ್ಕಳು, ಅಲ್ಲಿ ಹೋದ ಮೇಲೆ ಕೊಡುವ ಹಣ ಹೆಚ್ಚಾಯಿತೆಂದು ಕಡಿಮೆ ಮಾಡಬೇಕೆಂದರೆ, ನಾನೇನು ಕೇಳುವವನಲ್ಲ. ಈಗಲೇ ಇದನ್ನು ಹೇಳಿಡುತ್ತೇನೆ. ಮೊನ್ನೆ ಹಾಗೆಯೇ ಆಯಿತು. ಒಬ್ಬ ಸಾಹೇಬನು ಐದು ರೂಪಾಯಿಗೆ ಬುಟ್ಟಿ ತೆಗೆದುಕೊಂಡನು. ಆದರೆ, ಬಂಗಲೆಗೆ ಹೋದ ಮೇಲೆ, ಸಾಹೇಬನ ಹೆಂಡತಿ ಸಾಹೇಬನಿಗಲ್ಲದೇ ನನಗೂ ಬಡಬಡಿಸಿದಳು. ಮತ್ತು ಕೊನೆಗೆ ಮೂರು ರೂಪಾಯಿಯಷ್ಟೇ ಕೈಮೇಲೆ ಇಟ್ಟಳು. ಮಾರದೇ ಹಾಗೆಯೇ, ತಿರುಗಿ ಬರೋಣವೆಂದರೆ, ಅಷ್ಟರೊಳಗೆ ಅಲ್ಲಿಯ ಮಕ್ಕಳು ಬುಟ್ಟಿ ಅರ್ಧ ಮಾಡಿಟ್ಟಿದ್ದರು. ಅದಕ್ಕಾಗಿಯೇ ನಾನು ಮೊದಲೇ ಹೇಳುತ್ತಿದ್ದೇನೆ’, ಎಂದೆಲ್ಲ ಬಡಬಡಿಸಿದನು. ಸ್ವಾಮಿಗಳು,’ಒಳ್ಳೇದು, ಒಳ್ಳೇದು! ನಿನಗೆ ಹತ್ತು ರೂಪಾಯಿ ಸಿಕ್ಕರೆ ಆಯಿತಲ್ಲಾ, ಆಯಿತು! ನಡೆ, ಮತ್ತೆ’, ಎಂದು ಹೇಳಲು, ಇಬ್ಬರೂ ಹೊರಟರು. ಸ್ವಾಮಿಗಳು ಆ ಹಳ್ಳಿಗನಿಗೆ ಅವನ ವಿಷಯ ಕೇಳುತ್ತ, ‘ಸತ್ಯದಿಂದ ನಡೆದರೆ ದೇವರು ಕೊಟ್ಟೇ ಕೊಡುತ್ತಾನೆ. ದೇವರಿಗೆ ಸತ್ಯಸಂಧರ ಮೇಲೆ ಹೆಮ್ಮೆಯಿರುತ್ತದೆ’, ಎಂದು ಅವನಿಗೆ ಹೇಳಿದರು. ಆ ಹಳ್ಳಿಗನು ಸ್ವಾಮಿಗಳ ಹತ್ತಿರ ಸಾಂಸಾರಿಕ ವಿಷಯಗಳ ಬಗ್ಗೆ ಮಾತನಾಡುತ್ತಿರಲು, ಬಂಗಲೆಯ ಹತ್ತಿರ ಬಂದರು.

ಅವರು ಸ್ವಾಮಿಗಳಿದ್ದ ಆ ಬಂಗಲೆಗೆ ಬಂದು ತಲುಪಿದಾಗ, ಆಗಿನ ಭೋರ ಸಂಸ್ಥಾನದ ರಾಜಾಸಾಹೇಬ, ಪೈಠಣಿನ ಮಹಾರಾಜ ಮತ್ತು ಕೀರ್ತನಕಾರ ನಿಜಾಮಪುರಕರ ಮತ್ತು ಇನ್ನೂ ನೂರಾರು ಜನರು ಅಲ್ಲಿ ಇದ್ದರು. ಸ್ವಾಮಿಗಳು ಬರುತ್ತಿದ್ದಾರೆಂದು ಕಂಡಕೂಡಲೇ, ಎಲ್ಲರೂ ಎದ್ದು ನಿಂತರು ಮತ್ತು ಪ್ರತಿಯೊಬ್ಬರೂ ಸ್ವಾಮಿಗಳಿಗೆ ನಮಸ್ಕಾರ ಮಾಡುತ್ತಿದ್ದರು. ಇದನ್ನೆಲ್ಲ ಆ ಹಳ್ಳಿಗ ನೋಡುತ್ತಲೇ ನಿಂತಿದ್ದನು. ಸ್ವಾಮಿಗಳು ನೆರೆದ ಆ ಸಮೂಹದಲ್ಲಿ ಸೇರಿಕೊಂಡರು. ಆ ಹಳ್ಳಿಗ ದೂರದಲ್ಲೇ ನಿಂತಿದ್ದನು. ‘ಓ! ಇವರೊಬ್ಬ ದೊಡ್ಡ ದೇವಮನುಷ್ಯರೇ ಇರಬೇಕು.

ಸೂಟಬೂಟಧಾರಿಗಳೂ ಇವರಿಗೆ ನಮಸ್ಕಾರ ಮಾಡುತ್ತಿದ್ದಾರೆ’, ಎಂದು ಅವನ ಮನಸ್ಸಿನಲ್ಲಿ ಬಂತು. ಅರ್ಧತಾಸು ದಾರಿಕಾಯ್ದು, ಅವನು ಸ್ವಾಮಿಗಳ ಒಬ್ಬ ಸೇವಕಶಿಷ್ಯನಿಗೆ ಸ್ಟ್ರೋಬೆರಿ ತೆಗೆದುಕೊಳ್ಳುವದರ ಬಗ್ಗೆ ಹೇಳಿ, ‘ಈ ದೇವಮನುಷ್ಯರು ಯಾರು?’, ಎಂದು ಕೇಳಿದನು. ಆ ಸೇವಕಶಿಷ್ಯನು, ‘ಇವರು ನಮ್ಮ ಗುರುಮಹಾರಾಜರು ಮತ್ತು ದೊಡ್ಡ ತಪಸ್ವಿಗಳಿದ್ದಾರೆ’, ಎಂದು ಹೇಳಿದನು. ಆಗ ಆ ಹಳ್ಳಿಗನು, ‘ಇದೊಂದೂ ನನಗೆ ಗೊತ್ತಿಲ್ಲವಾಗಿತ್ತು ಮತ್ತು ಅವರೂ ಹೇಳಲಿಲ್ಲ. ನಮ್ಮಂತ ಬುದ್ಧಿಹೀನರಿಗೆ ಹೇಗೆ ತಿಳಿಯಬೇಕು? ನಾನು ಈ ಮಹಾರಾಜರಿಗೆ ನೀನು – ತಾನು, ಎಂದು ಮಾತನಾಡಿದೆ. ಈಗೇನಾಗುವದೋ? ನನ್ನಂತ ಬಡವರೂ ಇಲ್ಲಿ ಇದ್ದಿರಬಹುದೇ? ಈಗೇನು ಮಾಡಲಿ? ಅವರ ಕಾಲಿಗೆ ಬೀಳಲೇ? ಆದರೆ ಈ ಎಲ್ಲ ದೊಡ್ಡ ಮನುಷ್ಯರ ಮಧ್ಯ ನಾನು ಹೇಗೆ ಹೋಗಲಿ? ಮಹಾರಾಜರನ್ನೇ ನೀವು ಈಕಡೆ ಕರೆದುಕೊಂಡು ಬರುತ್ತೀರಾ?’, ಎಂದು ಸೇವಕ ಶಿಷ್ಯನ ಹತ್ತಿರ ಬೇಡಿಕೊಂಡನು. ಆಗ ಆ ಸೇವಕ ಶಿಷ್ಯನು ಅವನನ್ನು ಆ ಜನಸಮೂಹದಲ್ಲಿ ಸ್ವಾಮಿಗಳ ಹತ್ತಿರ ಕರೆದುಕೊಂಡು ಹೋದನು. ಅವನನ್ನು ನೋಡುತ್ತಲೇ ಸ್ವಾಮಿಗಳಿಗೆ ಕೂಡಲೇ ನೆನಪಾಯಿತು ಮತ್ತು ‘ಆತನಿಗೆ ಹತ್ತು ರೂಪಾಯಿ ಕೊಡಿರಿ ಮತ್ತು ಊಟ ಮಾಡಿಕೊಂಡು ಹೋಗಲು ಹೇಳಿ’, ಎಂದು ಹೇಳಿದರು. ಆ ಹಳ್ಳಿಗನು ಸ್ವಾಮಿಗಳಿಗೆ ದೂರದಿಂದಲೇ ನಮಸ್ಕಾರ ಮಾಡಿದನು ಮತ್ತು ತಾನು ದೊಡ್ಡ ತಪ್ಪು ಮಾಡಿದ ಬಗ್ಗೆ ಅವನಿಗೆ ಬಹಳ ದುಃಖವಾಯಿತು. ಸ್ವಾಮಿಗಳಿಗೆ ಇದನ್ನೆಲ್ಲಾ ಹೇಳಬೇಕೆಂದು ಅನಿಸಿತು. ಆದರೆ. ಸ್ವಾಮಿಗಳು ಸಿಗುವದೇ ಶಕ್ಯವಿಲ್ಲದಾಯಿತು. ಸ್ವಾಮಿಗಳೊಂದಿಗೆ ಬರುತ್ತಿರುವಾಗ ರಸ್ತೆಯಲ್ಲಿ ಸ್ವಾಮಿಗಳು ನಾಳೆಯೂ ಸ್ಟ್ರೋಬೆರಿಯ ಬುಟ್ಟಿ ತರಲು ಹೇಳಿದ್ದರು. ಹಾಗಾಗಿ, ನಾಳೆ ಈ ಜನವೆಲ್ಲಾ ಹೋಗಬಹುದು ಮತ್ತು ಆರಾಮಾಗಿ ಸ್ವಾಮಿಗಳನ್ನು ಸಿಗಬಹುದು, ಎಂದು ಆತನು ವಿಚಾರ ಮಾಡಿದನು.

ಮರುದಿನ ಆ ಹಳ್ಳಿಗನು ಸ್ಟ್ರೋಬೆರಿ ಬುಟ್ಟಿಯೊಂದಿಗೆ ಬಂದಾಗ, ಸಿನೇಮಾ ಪ್ರಪಂಚದ ಬಹಳಿಷ್ಟು ಜನರು, ಮಹಾರಾಷ್ಟ್ರದ ಪ್ರಸಿದ್ಧ ಕವಿ ಗ.ದಿ.ಮಾಡಗೂಳಕರ ಮತ್ತು ಇನ್ನೂ ಅನೇಕ ಜನರು ಬಂದಿದ್ದರು. ಒಬ್ಬ ಸೇವಕ ಶಿಷ್ಯನು ಸ್ಟ್ರೋಬೆರಿ ತೆಗೆದುಕೊಂಡು ಹತ್ತು ರೂಪಾಯಿ ಕೊಟ್ಟು, ಊಟಮಾಡಿ ಹೋಗಲು ಹೇಳಿದನು. ಆ ದಿನವೂ ಅವನಿಗೆ ಸ್ವಾಮಿಗಳ ದರ್ಶನ ದೂರದಿಂದಲೇ ಆಯಿತು. ತಿರುಗಿ ಬರುತ್ತಿರುವಾಗ ದರ್ಶನದ ತಳಮಳ ಹೆಚ್ಚಾಯಿತು ಮತ್ತು ಹಾಗಾಗಿ ಅವನಿಗೆ ರಾತ್ರಿ ನಿದ್ದೆ ಬರಲಿಲ್ಲ. ‘ಇಷ್ಟು ದೊಡ್ಡ ದೇವಮನುಷ್ಯ ತನ್ನ ಸಂಗಡ ಮಾತನಾಡಿದರೂ ತನಗೆ ಅವರು ಯಾರೆಂದು ತಿಳಿಯಲೇ ಇಲ್ಲ ಮತ್ತು ನಂತರ ತಿಳಿದ ಮೇಲೆ ದರ್ಶನ ಸಿಗುವದೇ ಕಠಿಣವಾಗಿದೆ’, ಎಂದು ಆತನು ದುಃಖಿಸಿದನು. ಬೆಳಿಗ್ಗೆ ಸ್ಟ್ರೋಬೆರಿ ತೆಗೆದುಕೊಂಡು ಹೊರಡುವಾಗ, ‘ಏನೇ ಆದರೂ ಇಂದು ದರ್ಶನ ಮಾಡಿದ ಹೊರ ಮತ್ತು ನನ್ನ ತಪ್ಪಿನ ಕ್ಷಮೆ ಕೇಳಿದ ಹೊರತು, ಮನೆಗೆ ಬರುವದಿಲ್ಲ!’, ಎಂದು ವಿಚಾರಮಾಡಿ, ಅದರಂತೆ, ತನ್ನ ಹೆಂಡತಿ – ಮಕ್ಕಳಿಗೆ, ‘ನಾನು ರಾತ್ರಿ ಮನೆಗೆ ಬರುವದಿಲ್ಲ’, ಎಂದು ಹೇಳಿ, ಹೊರಟನು. ಇಂದೂ ಅಷ್ಟೇ ಜನದಟ್ಟಣೆಯಿತ್ತು. ಆದರೆ, ಇಂದು ಆತನ ನಿರ್ಧಾರ ದೃಢವಾಗಿತ್ತು.

ಸ್ಟ್ರೋಬೆರಿ ತೆಗೆದುಕೊಂಡು ಹೋಗುವ ಸೇವಕ ಶಿಷ್ಯನಿಗೆ, ‘ನನಗೆ ಸ್ವಾಮಿಗಳ ದರ್ಶನ ಮಾಡಿಸಿಕೊಡಿ’, ಎಂದು ವಿನಂತಿಸಿಕೊಂಡನು. ಆ ದಿನ ಸ್ವಾಮಿಗಳು ಬೆಳಿಗ್ಗೆಯಿಂದಲೇ ಲೇಖನ ಬರೆಯುವದರಲ್ಲಿಯೇ ಮಗ್ನರಾಗಿದ್ದರಿಂದ, ಬೆಳಿಗ್ಗೆಯ ಅಲ್ಪೋಪಹಾರವನ್ನೂ ಮಾಡಿರಲಿಲ್ಲ. ಆದುದರಿಂದ, ‘ಸ್ವಾಮಿಗಳು ಇಂದು ಬೆಳಿಗ್ಗೆಯಿಂದಲೇ ತುಂಬಾ ಕೆಲಸದ ಗಡಿಬಿಡಿಯಲ್ಲಿದ್ದಾರೆ. ನಿನಗೆ ದರ್ಶನ ಸಿಗುವದು ಕಠಿಣ’, ಎಂದು ಹೇಳಿ ಅವನು ಒಳಗಡೆ ಹೋದರು. ಅದನ್ನು ಕೇಳುತ್ತಲೇ ಆ ಹಳ್ಳಿಗನಿಗೆ ತಡೆಯಲಾರದ ಅಳು ಹರಿದುಬಂತು. ಆತನು ತನ್ನನ್ನೇ ದೋಷಿಸಿಕೊಳ್ಳಹತ್ತಿದನು. ‘ನಾನು ಮಹಾಪಾಪಿಯು. ನನ್ನ ಕೈಗೆ ಪಾರಸಮಣಿ ಸಿಕ್ಕಿತು. ಆದರೆ ನಾನು ಅದನ್ನು ಗುರುತಿಸಲಾರದೇ ಹೋದೆ. ದೇವರೇ! ಯಾಕೆ ನನ್ನ ಮೇಲೆ ದಯೆ ಬರುವದೇ ಇಲ್ಲವೇ ಮಹಾರಾಜರಿಗೆ?’, ಎಂಬೆಲ್ಲ ವಿಚಾರ ಮನಸ್ಸಿನಲ್ಲಿ ಬಂದು ಅವನ ಅಂತಃಕರಣ ದುಃಖದಿಂದ ವ್ಯಥಿತವಾಯಿತು. ಅಷ್ಟರಲ್ಲಿ ಸ್ವಾಮಿಗಳು, ಏನೋ ಕಾರಣದಿಂದ ಹೊರಗೆ ಬಂದರು ಮತ್ತು ಆ ಹಳ್ಳಿಗ ಅಳುತ್ತ ಕುಳಿತಿದ್ದು ಅವರಿಗೆ ಕಾಣಿಸಿತು. ಸ್ವಾಮಿಗಳು ಅವನ ಹತ್ತಿರ ಹೋದರು. ಆದರೆ, ಮುಖಮುಚ್ಚಿ ಅಳುತ್ತ ಕುಳಿತ ಆತನಿಗೆ ಸ್ವಾಮಿಗಳು ಹತ್ತಿರ ಬಂದಿದ್ದೂ ತಿಳಿಯಲಿಲ್ಲ. ಕೊನೆಗೆ, ಸ್ವಾಮಿಗಳೇ ಅವನನ್ನು, ‘ಅರೇ! ನೀನು ಏಕೆ ಅಳುತ್ತಿರುವೆ?’ ಎಂದು ಕೇಳಿದರು. ಇದನ್ನು ಕೇಳಿದೊಡನೆಯೇ ಆತನು ಕತ್ತೆತ್ತಿ ನೋಡಿದಾಗ ಮುಂದೆ ಸ್ವಾಮಿಗಳಿದ್ದರು. ಆತನು ಸ್ವಾಮಿಗಳ ಕಾಲುಗಳನ್ನು ಗಟ್ಟಿಯಾಗಿ ಅಪ್ಪಿಕೊಂಡು, ಗಳಗಳನೆ ಅಳಹತ್ತಿದನು. ಸ್ವಾಮಿಗಳು ಎಷ್ಟೋ ಕಾಲ ಆತನ ಬೆನ್ನ ಮೇಲೆ ಕೈಯಾಡಿಸುತ್ತ, ಆತನನ್ನು ಶಾಂತ ಮಾಡಿದರು. ಆತನು, ‘ತಾವು ಅಷ್ಟು ದೊಡ್ಡ ಮಹಾತ್ಮರಿದ್ದರೂ, ನಾನು ಬುದ್ಧಿಹೀನ ನಿಮಗೆ ‘ನೀನು ತಾನು’ ಎಂದು ಹೇಳಿದೆ. ಈ ಪಾಪ ಎಲ್ಲಿ ತೀರಿಸಲಿ? ನಿಮ್ಮ ಹೊರತು ನಾನು ಮತ್ತಿನ್ಯಾರಿಗೆ ಹೇಳಲಿ? ನನ್ನನ್ನು ಕ್ಷಮಿಸಬೇಕು’, ಎಂದು ಆತನು ದೀನನಾಗಿ ಬೇಡಿಕೊಂಡನು. ಆತನು ಮುಂದುವರಿಸಿ, ‘ನಾಳೆ ನಾನು ನನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ. ನಮ್ಮೆಲ್ಲರ ಮೇಲೆ ತಮ್ಮ ದಯೆ ತೋರಬೇಕು’, ಎಂದು ಕೇಳಿಕೊಂಡನು. ಸ್ವಾಮಿಗಳು ಆ ಹಳ್ಳಿಗನ ವಿನಂತಿಯನ್ನು ಒಪ್ಪಿಕೊಂಡರು. ಮರುದಿನ ಸ್ವಾಮಿಗಳು ಅವನ ಕುಟುಂಬದವರಿಗೆ ದರ್ಶನ ನೀಡಿದರು ಮತ್ತು ಗುರುವಾರ ಆತನ ಸಂಪೂರ್ಣ ಕುಟುಂಬಕ್ಕೆ ಉಪದೇಶ ಕೊಟ್ಟು ಪುನೀತ ಮಾಡಿದರು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ವೈಶಾಖ, ೧೯೦೪, ಇಸವಿ ಸನ ೧೯೮೨, ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img