Memories

52. ಶ್ರೀ ಗುರುಕೃಪೆ ಅಗಮ್ಯವಾಗಿದೆ

(ನಿರೂಪಣೆ : ಶ್ರೀಧರಭಕ್ತ ಪ್ರಾ. ದಿಲೀಪ ಗೊಗಾಟೆ, ನಾಂದೇಡ)

ಭಗವಾನ ಶ್ರೀಧರಸ್ವಾಮಿಗಳ ಸಗುಣ ರೂಪದ ದರ್ಶನ ನನ್ನ ಭಾಗ್ಯದಲ್ಲಿಲ್ಲಾಗಿತ್ತು. ಸ್ವಾಮಿಗಳ ಕೃಪೆಯು ನನ್ನ ತಮ್ಮನಿಗೆ ಲಭಿಸಿತ್ತು. ಆದುದರಿಂದ ಶ್ರೀಧರಸ್ವಾಮಿಗಳೆಂಬ ಒಬ್ಬ ದೊಡ್ಡ ಮಹಾತ್ಮರು ಆಗಿಹೋಗಿದ್ದರೆಂಬ ಅರಿವಷ್ಟೇ ನನಗೆ ಇತ್ತು. ಸ್ವಾಮಿಗಳ ಕೃಪೆ ನನ್ನ ತಮ್ಮನಿಗಾಗುವದಕ್ಕೆ ಅವನ ಬಾಲ್ಯಾವಸ್ಥೆಯಲ್ಲಿ ಬರುತ್ತಿದ್ದ ಅಪಸ್ಮಾರ ರೋಗವೇ ಕಾರಣವಾಯಿತು. ಸ್ವಾಮಿಗಳ ಮಹಾತ್ಮೆ ನನ್ನ ತಾಯಿಗೆ ತಿಳಿದಿದ್ದರಿಂದ ಅವಳು ನನ್ನ ತಮ್ಮನನ್ನು ಹೈದರಾಬಾದಿಗೆ ಹೋಗುವಾಗ ಕರೆದುಕೊಂಡೇ ಹೋಗಿದ್ದಳು. ಸ್ವಾಮಿಗಳ ಕೃಪೆಯಿಂದ ಆತನ ಅಪಸ್ಮಾರ ಬೇಗ ಗುಣವಾಯಿತು. ಅದಕ್ಕೂ ಮೊದಲು ನನ್ನ ತಂದೆ ತಾಯಿಗಳು ಅವನಿಗೆ ಯಥಾಶಕ್ತಿ ಔಷಧೋಪಚಾರ ಮಾಡಿದ್ದರು. ಔಷಧದಿಂದ ಏನು ಸಾಧ್ಯವಾಗಲಿಲ್ಲವೋ ಅದು ಸ್ವಾಮಿಗಳ ಆಶೀರ್ವಾದದಿಂದ ಸಾಧ್ಯವಾಯಿತು ಮತ್ತು ನಮ್ಮ ಕುಟುಂಬದ ದೊಡ್ಡ ಚಿಂತೆ ದೂರವಾಯಿತು. ಇದು ಸ್ವಾಮಿಗಳ ಕೃಪೆಯ ಮೊದಲ ದರ್ಶನವಾಯಿತು.

ಸ್ವಾಮಿಕೃಪೆಯ ಈ ಅರಿವು ನನಗೆ ಬಹಳ ದಿನ ಸುಪ್ತಾವಸ್ಥೆಯಲ್ಲಿಯೇ ಇತ್ತು. ಸ್ವಾಮಿಗಳ ದರ್ಶನ ಮಾಡಬೇಕು, ಅವರ ವಿಷಯದಲ್ಲಿ ಮಾಹಿತಿ ಸಂಗ್ರಹಿಸಬೇಕು, ಎಂದು ಎಂದೂ ಅನಿಸಲೇ ಇಲ್ಲ. ಆ ಸಮಯದಲ್ಲಿ ನಾನು ಸಣ್ಣ ವಯಸ್ಸಿನವನಾಗಿದ್ದೆನೆಂಬುದೇನೋ ನಿಜವೇ. ಆದರೆ, ಸ್ವಾಮಿಗಳ ಒಬ್ಬ ಶಿಷ್ಯರಿಂದಾಗಿ ಕಳೆದ ಎರಡು ವರ್ಷಗಳ ಮೊದಲು ನನಗೆ ಸ್ವಾಮಿಗಳ ಮೇಲೆ ಅಧಿಕ ಉತ್ಸುಕತೆ ಉಂಟಾಯಿತು.

ಅದಾಗಿದ್ದು ಹೀಗೆ….
ಪುಣೆ ಬದಿಯ ಒಂದು ಸಾತ್ವಿಕ ಮಹಿಳೆ ದೇಗಲೂರಿಗೆ ಹೋಗಲು ನಾಂದೇಡಿಗೆ ಬಂದರು. ಇಷ್ಟು ದೂರದಿಂದ ಈ ಮಹಿಳೆ ಸ್ವಾಮಿಗಳ ಮೂಲ ಊರಿನ ದರ್ಶನಕ್ಕೆ ಹೋಗುತ್ತಿದ್ದಾರೆಂದ ಮೇಲೆ ಸ್ವಾಮಿಗಳು ನಿಜವಾಗಿಯೂ ದೊಡ್ಡ ಮಹಾತ್ಮರೇ ಇದ್ದಿರಬೇಕೆಂದು ಮತ್ತೊಮ್ಮೆ ಅನಿಸಿತು. ಸ್ವಾಮಿಗಳ ಪಾದುಕೆ ನಾಂದೇಡದಲ್ಲಿ ಡಾ|ಸಾವರೀಕರರ ಮನೆಯಲ್ಲಿ ಇದ್ದ ಮಾಹಿತಿಯನ್ನೂ ಅವಳು ನನಗೆ ಕೊಟ್ಟಳು.

ಇಂದು ಸ್ವಾಮಿಗಳು ದೇಹದಲ್ಲಿಲ್ಲ. ಆದರೂ ಅವರ ಪಾದುಕೆಯ ದರ್ಶನವನ್ನಾದರೂ ತೆಗೆದುಕೊಳ್ಳುವ ಉದ್ದೇಶದಿಂದ ನಾನು ಡಾ| ಸಾವರೀಕರರ ಮನೆಗೆ ಹೋದೆನು ಮತ್ತು ಈಗಲೂ ಹೋಗುತ್ತಿದ್ದೇನೆ. ಪ್ರತಿಸಲವೂ ಸ್ವಾಮಿಗಳ ಮಹಾತ್ಮೆ ಅರ್ಥಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಲೇ ಇದೆ. ಡಾಕ್ಟರ ಸಾಹೇಬರೂ ಸಮಯ ಸಿಕ್ಕಾಗೆಲ್ಲ ಸ್ವಾಮಿಗಳ ಮಹಾತ್ಮೆ ಹೇಳುತ್ತಲೇ ಇರುತ್ತಾರೆ.

ಒಮ್ಮೆ ಒಬ್ಬ ರುಗ್ಣಳಿಗೆ ಸ್ವಾಮಿಗಳ ಕೃಪೆಯಾದ ಬಗೆಯನ್ನು ಅವರು ಹೇಳಿದರು. ಆ ಮಹಿಳೆಯ ಕಥೆ ಹೃದಯವಿದ್ರಾವಕವಾಗಿದೆ. ಆ ಸ್ತ್ರೀಯ ಬೆನ್ನೆಲುಬಿನ ಮಣಿಕಟ್ಟುಗಳಲ್ಲಿ ತೊಂದರೆಯಿತ್ತು. ಎದ್ದು ಕೂಡಲೂ ಆಗುತ್ತಿರಲಿಲ್ಲ. ಅಸ್ಥಿರೋಗತಜ್ಞರು ಅದೊಂದು ಮಣಿಕಟ್ಟನ್ನು ತೆಗೆದು ಹಾಕಬೇಕಾಗುತ್ತದೆ ಮತ್ತು ಜೀವನವಿಡೀ ಹಾಸಿಗೆಯ ಮೇಲೆ ಮಲಗಿಯೇ ಇರಬೇಕಾಗುತ್ತದೆ, ಎಂದು ಹೇಳಿದ್ದರು. ಕೊನೆಯ ಪ್ರಯತ್ನವೆಂದು ಆ ಸ್ತ್ರೀಯನ್ನು ಸ್ಟ್ರೆಚರ ಮೇಲಿಟ್ಟು ಸಾವರೀಕರರ ಮನೆಯ ಮೂರನೆಯ ಮಾಳಿಗೆಗೆ ಪಾದುಕಾದರ್ಶನಕ್ಕೆಂದು ತೆಗೆದುಕೊಂಡು ಬಂದರು. ಆ ತಾಯಿ ಸ್ವಾಮಿಗಳ ಅದೇನು ಆರಾಧನೆ ಮಾಡಿದ್ದಳೋ ನನಗೆ ಗೊತ್ತಿಲ್ಲ; ಆದರೆ ಇಂದು ಆ ಮಹಿಳೆ ಆರೋಗ್ಯ ಸಂಪನ್ನವಾಗಿದ್ದು, ಮೂರು ಮಹಡಿಗಳನ್ನು ತಾನೇ ಸ್ವತಃ ಹತ್ತಿಳಿಯುತ್ತಾಳೆ.
ಯಾರೆಲ್ಲರು ಹರಕೆಗಳನ್ನು ಹೊತ್ತು ಸ್ವಾಮಿಗಳ ಕೃಪೆ ಹೊಂದಿದರೋ, ಅವರ ಕಥೆಗಳನ್ನೆಲ್ಲ ಸಾವರೀಕರರಿಂದ ನಾನು ಬಹಳ ಸಲ ಕೇಳಿದೆ. ಪಾದುಕೆಗಳ ಮುಂದೆ ಹೊತ್ತ ಹರಕೆಗಳನ್ನು ಸ್ವಾಮಿಗಳು ಸ್ವೀಕರಿಸುತ್ತಾರೆ ಮತ್ತು ಜನರ ಮನೋರಥ ಪೂರ್ಣಗೊಳಿಸುತ್ತಾರೆ, ಎಂದು ಅವರು ಹೇಳುತ್ತಿರುತ್ತಾರೆ. ನೀರು ಕಂಡೊಡನೆ ಬಾಯಾರಿಕೆಯಾಗುವಂತೆ ಅಥವಾ ದೊಡ್ಡ ದಾನಿಯೊಬ್ಬ ಬಂದಿರುವನೆಂದಾಗ, ನಾವೂ ದಾನ ಕೇಳುವ ಇಚ್ಛೆಯಾಗುವಂತೆ, ನನ್ನ ಸ್ಥಿತಿಯೂ ಆಯಿತು. ಆ ಸಮಯದಲ್ಲಿ ‘ಬಿಸಿನೆಸ್ ಕೊಮ್ಯುನಿಕೇಶನ್’ (ವ್ಯಾಪಾರೀ ಸಂವಹನ), ಎಂಬ ವಿಷಯದ ಮೇಲೆ ಇಂಗ್ಲಿಷಿನಲ್ಲಿ ಪುಸ್ತಕ ಬರೆಯಬೇಕೆಂದು ನನ್ನ ಮನಸ್ಸಿನಲ್ಲಿ ಬಂದಿತ್ತು. ಆದರೆ, ಪುಸ್ತಕ ಬರೆಯುವಷ್ಟು ನನ್ನ ಹತ್ತಿರ ಭಾಷಾಜ್ಞಾನವಿಲ್ಲವಾಗಿತ್ತು. ಅಷ್ಟೇ ಏಕೆ, ನನಗೆ ಆ ಭಾಷೆಯ ಅತ್ಯಲ್ಪ ಜ್ಞಾನವಾದರೂ ಇದೆಯೆಂದು ಹೇಳುವುದೂ ಕೂಡ ಕಷ್ಟಕರವೇ ಎನ್ನುವಷ್ಟು ನನ್ನ ಸ್ಥಿತಿಯಿತ್ತು. ಆದರೆ ಪುಸ್ತಕ ಬರೆಯಬೇಕೆಂಬ ಇಚ್ಛೆ ತೀವ್ರವಾಗಲು, ಕೊನೆಗೆ ಸ್ವಾಮಿಗಳ ಚರಣಗಳಲ್ಲಿ ಹರಕೆ ಹೊತ್ತೆನು, ‘ಬರುವ ಕಾಲೇಜು ಪ್ರಾರಂಭವಾಗುವ ಮುನ್ನ ಪುಸ್ತಕ ಬಿಡಗಡೆಯಾಗಬೇಕು’. ಆಶ್ಚರ್ಯದ ವಿಷಯವೆಂದರೆ, ನಾಲ್ವತ್ತು ದಿನಗಳಲ್ಲಿ ಪುಸ್ತಕ ಅಚ್ಚಾಗಿ, ಪುಸ್ತಕದಂಗಡಿಗಳಲ್ಲಿ ಸಿಗಲೂ ಹತ್ತಿತು. ಇಂದು ಪುಸ್ತಕದ ಆ ಆವೃತ್ತಿ ಮುಗಿದು ಕೂಡ ಹೋಗಿದೆ. ‘ಮೂಕಂ ಕರೋತಿ ವಾಚಾಲಮ್’, ಇದರ ಪ್ರತ್ಯಕ್ಷ ಅನುಭೂತಿಯಾಯಿತು. ‘ಬೇಡಿದ್ದು ಸಿಗುತ್ತದೆ’, ಎಂಬ ಅನುಭವ ಒಮ್ಮೆ ಆದ ಮೇಲೆ, ಬೇಡಿಕೊಳ್ಳುವ ಇಚ್ಛೆ ಮತ್ತೆ ಆಗದಿದ್ದಲ್ಲಿ ಅದೊಂದು ಆಶ್ಚರ್ಯವೇ! ಮನೆಗಾಗಿ ಸಣ್ಣ ನೆಲ ತೆಗೆದುಕೊಳ್ಳಲೂ ಆರ್ಥಿಕ ಪಾತ್ರತೆಯಿಲ್ಲದಿರುವಂತಹ ಪರಿಸ್ಥಿತಿಯಲ್ಲಿಯೂ, ಕೇವಲ ಸ್ವಾಮಿಕೃಪೆಯಿಂದ ನಾಲ್ಕು ದೊಡ್ಡ ಕೋಣೆಗಳ ಮನೆ ಎದ್ದು ನಿಲ್ಲಿಸಲು ಶಕ್ಯವಾಯಿತು. ಮನೆ ಕಟ್ಟುವಾಗ ಹಣ ಹೇಗೆ ಕೂಡಿ ಬಂತು ಎನ್ನುವದು ಈಗಲೂ ಗೂಢವಾಗಿಯೇ ಇದೆ. ಮನೆಯ ಕೆಲಸ ಹಣದ ಕೊರತೆಯಿಂದ ನಿಂತಿದೆ, ಎಂಬ ಒಂದು ದಿನವೂ ಬರಲಿಲ್ಲ. ಕೈಯಲ್ಲಿ ಕೇವಲ ಐದು ಸಾವಿರ ರೂಪಾಯಿ ಕೂಡ ಇಲ್ಲದಿದ್ದಾಗ ಪ್ಲಾಟ ಖರೀದಿ ಮಾಡಿ, ಮನೆ ಕಟ್ಟಲಿಕ್ಕೆ ಶಕ್ಯವಾಯಿತು, ಎಂದರೆ ಯಾರಿಗೂ ನಿಜವೆನಿಸಲಿಕ್ಕಿಲ್ಲ. ಆದರೆ ಇದು ವಸ್ತುಸ್ಥಿತಿಯಾಗಿದೆ. ಪ್ಲಾಟ ಮತ್ತು ಮನೆ ಕೂಡಿ ಸುಮಾರು ಲಕ್ಷದವರೆಗೂ ಖರ್ಚು ಆಗಿದ್ದು, ಒಬ್ಬ ನಿರ್ಧನ ಮನುಷ್ಯನಿಗೆ ಸ್ವಾಮಿಗಳು ಕೊಟ್ಟ ವರದಾನವೇ ಇದಾಗಿದೆ. ಸ್ವಾಮಿಕೃಪೆಯಿಂದ ಮತ್ತೂ ಕೆಲವು ಅನುಭವಗಳಾಗಿವೆ. ಆದರೆ, ನನಗೆ ಈ ಎಲ್ಲ ವಿಷಯ ಗೌಣವಾಗಿ ಕಾಣುತ್ತಿದೆ. ಇವೆಲ್ಲ ಸ್ವಾಮಿಗಳ ಸಹಜ ಲೀಲೆಯಾಗಿದೆ. ಇವೆಲ್ಲ ಅವರ ಕೃಪೆಯ ಅತ್ಯಂತ ನಗಣ್ಯ ವಿಷಯಗಳಾಗಿವೆ. ಗುರುಗಳ ನಿಜ ಮಹಾನತೆಯ ಮುಂದೆ ಇವೆಲ್ಲ ಏನೇನೂ ಅಲ್ಲ. ಗುಕಾರಸ್ತ್ವಂಧಃಕಾರಶ್ಚ ರುಕಾರಸ್ತೇಜ ಉಚ್ಯತೇ| ಅಜ್ಞಾನಗ್ರಾಸಕಂ ಬ್ರಹ್ಮ ಗುರುರೇವ ನ ಸಂಶಯಃ| … ಈ ರೀತಿ ಗುರುವಿನ ಯಾವ ವರ್ಣನೆಯಿದೆಯೋ ಅದರ ಅನುಭೂತಿಯಾಗಬೇಕೆಂಬ ಇಚ್ಛೆ ಈಗ ಉದ್ಭವಿಸಿದೆ. ಗುರು ಎಲ್ಲಿ ನೋಡುತ್ತಾರೋ ಅಲ್ಲಿ ದುಃಖ ಸಮೂಲಾಗ್ರ ನಾಶವಾಗಿ, ಸುಖದ ಮೊಳಕೆ ಒಡೆಯುತ್ತದೆ. ಅಜ್ಞಾನ ಲಯವಾಗಿ ಜ್ಞಾನದ ಉದಯವಾಗುತ್ತದೆ. ‘ಅವರ ಒಂದು ನಿಶ್ವಾಸದಿಂದ ಕೋಟಿ ಕೋಟಿ ಜೀವಿಗಳ ಉದ್ಧಾರವಾಗುತ್ತದೆ. ಅವರ ಸ್ಪರ್ಷದಿಂದ ಶಾಂತಿಯ ಮಹಾಸಾಗರವೇ ನಿರ್ಮಾಣವಾಗುತ್ತದೆ’, ಹೀಗೆ ಗುರುವಿನ ವರ್ಣನೆ ಮಾಡಲ್ಪಡುತ್ತದೆ. ಹೀಗೆ, ಅಗಾಧ ಸಾಮರ್ಥ್ಯವಿರುವ ಗುರುಮಾತೆಯ ದರ್ಶನ ಆ ಮೂರ್ತಸ್ವರೂಪದಲ್ಲಿ ನನಗಾಗಬಹುದೇ? ಯಾರನ್ನಾದರೂ ರೋಗಮುಕ್ತ ಮಾಡಿದರು, ಯಾರನ್ನಾದರೂ ದಾರಿದ್ರ್ಯಮುಕ್ತ ಮಾಡಿದರು, ಈ ಎಲ್ಲ ವಿಷಯಗಳು, ಯವುದೋ ಮಹಾಪಂಡಿತನು ಮೂಲಾಕ್ಷರಗಳನ್ನು ಬರೆದು ತೋರಿಸಿದಂತೆ ಅತ್ಯಂತ ಗೌಣವಾಗಿದೆ ಮತ್ತು ಅವು ಗುರುವಿನ ಶ್ರೇಷ್ಠತ್ವವನ್ನು ಸಿದ್ಧ ಮಾಡುವದಕ್ಕಾಗಿ ಅಲ್ಲವೇ ಅಲ್ಲ. ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ| ಚಕ್ಷುಸಮ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ| …

ಈ ಗುರುಗೀತೆಯ ವರ್ಣನೆ ಅನುಭವದಲ್ಲಿ ಬರಬೇಕೆಂಬ ಇಚ್ಛೆ ಇದೆ. ಕೊಡುವವನು ಅತ್ಯಂತ ಮಹಾನ ದಾತನೇ ಇದ್ದರೂ, ತೆಗೆದುಕೊಳ್ಳುವ ನನ್ನ ಜೋಳಿಗೆಯೇ ಹರಿದಿದ್ದದ್ದಾದರೆ ಏನು ಮಾಡಲಿಕ್ಕಾಗುವದು? ಆದರೂ ನನ್ನ ಈ ಇಚ್ಛೆ ಈಡೇರಲಿ ಎಂಬ ಉತ್ಕಟ ತಳಮಳವಿದೆ ಮತ್ತು ಆ ಇಚ್ಛೆಯನ್ನು ಸ್ವಾಮಿಗಳೇ ಪೂರೈಸುತ್ತಾರೆ ಎಂಬ ವಿಶ್ವಾಸ, ಇಲ್ಲಿಯವರೆಗಿನ ಅನುಭವಗಳ ಮೇಲಿಂದ ದೃಢವಾಗಿದೆ.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಜ್ಯೇಷ್ಠ, ೧೯೦೪, ಇಸವಿ ಸನ ೧೯೮೨, ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img