Memories

53. ಭೂತ-ಪಿಶಾಚಿ ಬಾಧಿತರು ಸ್ವಾಮಿಗಳ ತೀರ್ಥದಿಂದ ಗುಣ ಹೊಂದಿದರು

(ನಿರೂಪಣೆ : ಶ್ರೀಧರಭಕ್ತೆ ಕು. ಲೀಲಾತಾಯಿ ಪೂಜಾರಿ, ಬಿ. ಎ. ಆನರ್ಸ)

ಮಹಾತ್ಮರ ಪ್ರತಿಯೊಂದೂ ಕಾರ್ಯ, ನಡತೆ ಘನತೆಯಿಂದೊಡಗೂಡಿರುತ್ತದೆ. ಆದುದರಿಂದಲೇ ಅವರಿಗೆ ಮಹಾತ್ಮರೆನ್ನುತ್ತಾರೆ. ಅದೇ ಪರಂಪರೆಯಲ್ಲಿ ನಮ್ಮ ಗುರುಮಾಯಿ ಶ್ರೀಧರ ಸ್ವಾಮಿ ಮಹಾರಾಜರು ಬರುತ್ತಾರೆ. ಸ್ವಾಮಿಗಳ ಹತ್ತಿರ ಜನಸಮೂಹ ಯಾವಾಗಲೂ ಮುತ್ತಿಕೊಂಡಿರುತ್ತಿತ್ತು. ಅವರಿದ್ದಲ್ಲಿ ಅದೊಂದು ಜಾತ್ರಾಸ್ಥಳವೇ ಆಗುತ್ತಿತ್ತು. ಕೇವಲ ಯಾವುದೋ ಒಂದು ಪ್ರಕಾರದ ಜನರು ಮಾತ್ರ ಅವರಲ್ಲಿ ಬರುತ್ತಾರೆ, ಎಂದಿಲ್ಲವಾಗಿತ್ತು. ಬಡವ – ಶ್ರೀಮಂತ, ಸಣ್ಣವ – ದೊಡ್ಡವ, ಸಜ್ಜನ – ದುರ್ಜನ, ಶಿಕ್ಷಿತ – ಅಶಿಕ್ಷಿತ, ಸಂತ – ಸನ್ಯಾಸಿ ಎಂದು ಮೊದಲಾಗಿ ಎಲ್ಲರೂ ಜಾತಿ – ಪಂಗಡಗಳ ಬೇಧವಿಲ್ಲದೇ, ಸ್ವಾಮಿಗಳ ದರ್ಶನಕ್ಕೆ ಬರುತ್ತಿದ್ದರು.

ಸ್ವಾಮಿಗಳ ಕೃಪೆಯಿಂದ, ದರ್ಶನದಿಂದ, ತೀರ್ಥದಿಂದ, ಮಂತ್ರಾಕ್ಷತೆಗಳಿಂದ ಭೂತ – ಪಿಶಾಚಿಗಳ ಬಾಧೆ ತೊಲಗುತ್ತಿತ್ತು; ಯಾರ ಮೇಲಾದರೂ ಜಾರಣ – ಮಾರಣಾದಿಗಳ ಪ್ರಯೋಗವಾಗಿದ್ದಿದ್ದರೆ, ಸ್ವಾಮಿಗಳ ಮಂತ್ರಿಸಿದ ತೀರ್ಥದಿಂದ ಅದು ದೂರವಾಗುತ್ತಿತ್ತು. ಸ್ವಾಮಿಗಳು ಮಾಂತ್ರಿಕರಲ್ಲ; ಆದರೆ, ಪರಮಾತ್ಮ ಪದದಲ್ಲಿ ಆರೂಢರಾಗಿರುವರಿಗೆ, ಇವೆಲ್ಲ ತಾನೇತಾನಾಗಿ ಪ್ರಾಪ್ತವಾಗಿರುತ್ತದೆ, ಎನ್ನುವ ಸಿದ್ಧಾಂತದಂತೆ, ಸ್ವಾಮಿಗಳ ಸ್ಥಿತಿಯಿತ್ತು. ಅಂತಹ ಮಾನಸಿಕ ರುಗ್ಣರು ಕೇವಲ ಸ್ವಾಮಿಗಳ ತೀರ್ಥದಿಂದ ಗುಣಹೊಂದುತ್ತಿದ್ದರು. ಹಾಗಾಗಿ ಅಂತಹ ಬಾಧಿತರಂತೂ ಸ್ವಾಮಿಗಳನ್ನು ಸಾಕ್ಷಾತ್ ಪರಮೇಶ್ವರನ ಅವತಾರವೇ ಎಂದು ಅರಿತು ನಡೆಯುತ್ತಿದ್ದರು.

ಸ್ವಾಮಿಗಳ ತೀರ್ಥದಿಂದ ಮಾನಸಿಕ ರುಗ್ಣರು ಗುಣಹೊಂದುತ್ತಾರೆ, ಎಂಬ ಅನುಭವವಾಗಿದ್ದ ಜನ ಶೃದ್ಧೆಯಿಂದ ಇತರರಿಗೂ ಹೇಳುತ್ತಿದ್ದರು ಮತ್ತು ಹಾಗಾಗಿ ಉಳಿದವರೂ ಸ್ವಾಮಿಗಳ ಹತ್ತಿರ ಬರಹತ್ತಿದರು. ಅದರಿಂದಾಗಿ, ಸಾಧಕರು, ಶಿಷ್ಯರು, ಅನುಗ್ರಹೀತರು ಮತ್ತು ಸಾಮಾನ್ಯ ಭಕ್ತಸಮೂಹವಲ್ಲದೇ, ಮಾನಸಿಕ ಸ್ವಾಸ್ಥವಿಲ್ಲದವರು ಮತ್ತು ಅವರೊಂದಿಗೆ ಚಿಂತಿತ ಅವರ ಮನೆಮಂದಿ, ಹೀಗೆ ಎಲ್ಲ ತರದ ಜನಸಮೂಹ ಸ್ವಾಮಿಗಳ ಹತ್ತಿರ ಯಾವಾಗಲೂ ಇರುತ್ತಿತ್ತು. ಹುಚ್ಚು ಹಿಡಿದವರಂತೂ ತಮ್ಮಷ್ಟಕ್ಕೇ ನಗುತ್ತ, ಒಮ್ಮೊಮ್ಮೆ ಸಂತೋಷದಿಂದ ಕುಣಿಯುತ್ತ, ಕೈಕುಣಿಸುತ್ತ, ಏನೇನೋ ಹಲಬುತ್ತ ಮತ್ತಾವುದನ್ನೂ ಗಮನಿಸದೇ ಇರುತ್ತಿದ್ದರೆ, ಕೆಲವು ನೋಡುವವರಿಗಂತೂ ಅವರ ಚೇಷ್ಟೆಗಳನ್ನು ನೋಡುತ್ತಿದ್ದರೆ ವೇಳೆ ಕಳೆದದ್ದೂ ಗಮನಕ್ಕೆ ಬರುತ್ತಿರಲಿಲ್ಲ.

ವರದಪುರದಲ್ಲಿ ಸ್ವಾಮಿಗಳು ಉಳಿದುಕೊಂಡಿದ್ದಾಗ, ಅಲ್ಲಿ ಪಾರ್ವತಿ ಎಂಬ ಹೆಸರಿನ ಒಬ್ಬಳು ಹುಚ್ಚಿ ಇದ್ದಳು. ಅವಳು ಹಗಲೂರಾತ್ರಿ ಒಬ್ಬಳೇ ಸತತವಾಗಿ ಬಡಬಡಿಸುತ್ತ ಇರುತ್ತಿದ್ದಳು ಮತ್ತು ಅವಳ ಬಡಬಡಿಕೆ ಒಮ್ಮೊಮ್ಮೆ ಅಸಂಬದ್ಧವಾಗಿದ್ದರೆ ಕೆಲವೊಮ್ಮೆ ಸುಸಂಬದ್ಧವಾಗಿರುತ್ತಿತ್ತು. ಒಂದು ರಾತ್ರಿ ಸ್ವಾಮಿಗಳು ವಿಶ್ರಾಂತಿಗಾಗಿ ದೇವಿಯ ಮಂದಿರದ ಆವಾರದಲ್ಲಿದ್ದ ಕೋಣೆಯಲ್ಲಿ ಮಲಗಿದ್ದರು. ಆ ಸಮಯದಲ್ಲಿ ಅಲ್ಲೇ ಹೊರಗೆ ಅವಳ ಬಡಬಡಿಕೆ ರಾತ್ರಿಯಿಡೀ ನಡೆದಿತ್ತು. ಬೆಳಿಗ್ಗೆ ಅವಳು ದರ್ಶನಕ್ಕೆ ಬಂದಾಗ ಸ್ವಾಮಿಗಳು,’ಪಾರ್ವತಿ, ಏನು ತಂಗಾ! ರಾತ್ರಿಯಿಡೀ ನಿನ್ನ ವ್ಯಾಖ್ಯಾನ ನಡೆದಿತ್ತು. ನೀನು ಒಂದು ನಿಮಿಷವೂ ಮಲಗಲಿಲ್ಲ. ನನಗೂ ನಿನ್ನ ನಿಲ್ಲದ ಬಡಬಡಿಕೆಯಿಂದ ನಿದ್ದೆ ಬರಲಿಲ್ಲ’ ಎಂದು ಹೇಳಿದರು. ಆಗ ಅವಳು,’ಮಹಾರಾಜರೇ ಅದು ಸರಿಯೇ ಇದೆ! ನಿಮಗೆ ರಾತ್ರಿಯಿಡೀ ನಿದ್ದೆ ಬರುವದರಲ್ಲಿ ಏನೂ ವಿಶೇಷವಿಲ್ಲ. ಯಾಕೆಂದರು ನಿಮಗೆ ನಿಮ್ಮ ಭಕ್ತರನ್ನಷ್ಟೇ ಉದ್ಧಾರ ಮಾಡಿದರೆ ನಿಮ್ಮ ಕಾರ್ಯವಾಯಿತು. ಆದರೆ, ನನಗಾದರೋ ಸಂಪೂರ್ಣ ಜಗತ್ತನ್ನೇ ಉದ್ಧಾರ ಮಾಡುವದಿರುತ್ತದೆ. ನಾನು ರಾತ್ರಿಯಿಡೀ ನಿದ್ದೆ ಮಾಡಿದರೆ ಅದು ಹೇಗೆ ಶಕ್ಯ, ಸ್ವಾಮಿನ್?’, ಎಂದು ಪ್ರತ್ಯುತ್ತರ ಕೊಟ್ಟಳು. ಅವಳ ಈ ಉತ್ತರದಿಂದ ಸ್ವಾಮಿಗಳೊಡಗೂಡಿ ನಮ್ಮೆಲ್ಲರಿಗೂ ನಕ್ಕು ನಕ್ಕು ಸಾಕಾಯಿತು. ಹೀಗೆಯೇ ಬಹಳ ಅಸಂಬದ್ಧ ಪ್ರಲಾಪಿಗಳೂ ಬರುತ್ತಿದ್ದರು.
ಒಮ್ಮೆ ಸ್ವಾಮಿಗಳ ಹತ್ತಿರ ಕುಲೀನ ಮನೆತನದ ಒಬ್ಬ ಬುದ್ಧಿಭ್ರಂಶವಾದ ಮಹಿಳೆಯನ್ನು ಕರೆದುಕೊಂಡು ಬಂದಿದ್ದರು. ಅವರು ಇನಾಮದಾರ ಕುಟುಂಬದ ಶ್ರೀಮಂತ ಮತ್ತು ಹೆಸರುವಾಸಿ ಜನರಾಗಿದ್ದರು ಮತ್ತು ಅವಳಂತೂ ನೋಡಲು ಅತ್ಯಂತ ಸುಂದರವಿದ್ದಳು. ಆದರೆ ಅವಳಿಗೆ ಅಕ್ಷರಶಃ ಬಾಹ್ಯ ಪ್ರಜ್ಞೆಯೇ ಇಲ್ಲವಾಗಿತ್ತು. ಅವಳಿಗೆ ಒಬ್ಬ ಸುಂದರ ಮಗಳೂ ಇದ್ದಳು. ಅವಳ ಮಗಳಿಗೆ ಎದೆ ಹಾಲೂಡಿಸಲೂ ಕೂಡ ಬೇರೆಯವರು ಅವಳಿಗೆ ಸಹಾಯ ಮಾಡಬೇಕಾಗುತ್ತಿತ್ತು. ಅಷ್ಟು ಅವಳಿಗೆ ಬಾಹ್ಯಪ್ರಜ್ಞೆ ಇಲ್ಲವಾಗಿತ್ತು. ಅವಳ ಈ ಅವಸ್ಥೆಯನ್ನು ನೋಡಿ, ಮನೆಯವರು ಮತ್ತು ತವರು ಮನೆಯವರಾದಿಯಾಗಿ ಎಲ್ಲರೂ ಬೇಸತ್ತು, ಕೊನೆಯ ಉಪಾಯವೆಂದು ಅವಳನ್ನು ಸ್ವಾಮಿಗಳ ಹತ್ತಿರ ಕರೆದುಕೊಂಡು ಬಂದಿದ್ದರು. ಅವಳು ತನ್ನ ದಿನನಿತ್ಯದ ಕಾರ್ಯಗಳನ್ನೂ ತಾನೇ ಮಾಡಿಕೊಳ್ಳಲು ಅಸಮರ್ಥಳಾಗಿದ್ದಳು. ಸ್ನಾನ ಮಾಡಿಸುವದೂ ಒಂದು ಮಹಾ ಸಾಧನೆಯೇ ಆಗಿತ್ತು. ಆದರೆ, ಮನೆಯವರು ಮತ್ತು ತವರು ಮನೆಯವರು ಕೂಡಿ, ಅವಳ ಎಲ್ಲ ನಿತ್ಯವಿಧಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದರು. ತಮ್ಮ ದೊಡ್ಡಸ್ತಿಕೆಯನ್ನು ಬಿಟ್ಟು, ಅವರು ಅಲ್ಲಿ ಎಲ್ಲ ಕೆಲಸದಲ್ಲಿ ಭಾಗಿಯಾಗುತ್ತಿದ್ದರು. ಹೀಗೆ ಅವರ ವಾಸ್ತವ್ಯ ಅಲ್ಲಿ ಬಹಳ ದಿನವಿತ್ತು. ಪ್ರತಿದಿನವೂ ಸ್ವಾಮಿಗಳು ಅವಳಿಗೆ ಮೂರು ಸಲ ತೀರ್ಥ ಕೊಡುತ್ತಿದ್ದರು. ಆ ಬುದ್ಧಿಭ್ರಂಶವಾದ ಹೆಂಗಸು ಕೆಲವೊಮ್ಮೆ ಸಾಮಾನ್ಯಳಂತೆ ಯೋಗ್ಯ ರೀತಿಯಲ್ಲಿ ವ್ಯವಹರಿಸುತ್ತಿದ್ದಳು. ಆದರೆ ಇನ್ನನೇಕ ಸಲ ಅತಿ ಮೂರ್ಖಳಂತೆ ನಡೆದುಕೊಳ್ಳುತ್ತಿದ್ದಳು. ಕೆಲವೊಮ್ಮೆ ಸ್ವಾಮಿಗಳು ಎಷ್ಟೇ ಪ್ರಶ್ನೆ ಮಾಡಿದರೂ ಶುದ್ಧ ಶುಂಭಿಯಂತೆ ಬಾಯಿ ಬಿಚ್ಚುತ್ತಲೇ ಇರಲಿಲ್ಲ. ಒಮ್ಮೊಮ್ಮೆ ಸರಿಯಾಗಿ ಊಟ ತಿಂಡಿ ಮಾಡಿದರೆ, ಇನ್ನು ಕೆಲವೊಮ್ಮೆ ನಾಲ್ಕು ನಾಲ್ಕು ದಿನಗಳಾದರೂ ಏನೂ ತೆಗೆದು ಕೊಳ್ಳದೇ ಉಪವಾಸವಿರುತ್ತಿದ್ದಳು. ಅವಳ ಅವಸ್ಥೆ ಯಾರೇ ನೋಡಿದರೂ ತಂಬಾ ಬೇಸರ ಪಟ್ಟುಕೊಳ್ಳುತ್ತಿದ್ದರು. ಹೀಗೆಯೇ ಕೆಲದಿನಗಳು ಕಳೆದವು.

ಒಂದು ದಿನ ….
ಎಂದಿನಂತೆ ಸ್ವಾಮಿಗಳು ತೀರ್ಥ ಕೊಟ್ಟ ಮೇಲೆ, ಅವಳು ಒಮ್ಮೆಲೇ ಸ್ವಾಮಿಗಳಿಗೆ ನಮಸ್ಕಾರ ಮಾಡಿದಳು ಮತ್ತು ಅವಳೊಳಗಿದ್ದ ದುಷ್ಟ ಶಕ್ತಿ,‘ನನ್ನ ಎರಡು ಸಾವಿರ ರೂಪಾಯಿ ಹಿಂದಿನ ಜನ್ಮದಲ್ಲಿ ತೆಗೆದುಕೊಂಡದ್ದಿದೆ. ಅದನ್ನು ಅವನು ತಂದು ನಿಮ್ಮ ಚರಣದಲ್ಲಿ ಹಾಕಿದರೆ ನಾನು ಬಿಟ್ಟು ಹೋಗುತ್ತೇನೆ’ ಎಂದು ಹೇಳಿತು. ಆ ವೇಳೆ ಸುದೈವದಿಂದ ಅವಳ ಯಜಮಾನನು ಅಲ್ಲೇ ಹತ್ತಿರದಲ್ಲಿ ಇದ್ದನು. ಆತನು ತತ್ಕಾಲ, ‘ನಾನು ಈಗಿಂದೀಗಲೇ ಹಣ ಕಳಿಸುತ್ತೇನೆ ಆದರೆ ನನ್ನ ಹಿಂದೆ ಬಿದ್ದಿರುವ ಈ ಆಪತ್ತನ್ನು ಕೊನೆಗೊಮ್ಮೆ ಪೂರ್ಣ ತೆಗೆದುಹಾಕಬೇಕು ಮತ್ತು ನನ್ನನ್ನು ಈ ದೊಡ್ಡ ಸಂಕಟದಿಂದ ಮುಕ್ತಮಾಡಬೇಕು. ನಾನು ನಿಮಗೆ ಜನ್ಮ ಜನ್ಮಾಂತರ ಋಣಿಯಾಗಿರುತ್ತೇನೆ’, ಎಂದು ಗದ್ಗದ ಕಂಠದಿಂದ ಸ್ವಾಮಿಗಳ ಹತ್ತಿರ ಬೇಡಿಕೊಂಡನು. ನಂತರ ಸ್ವಾಮಿಗಳು, ‘ಮಗಾ! ಅಳಬೇಡ. ಇವಳ ಮೈಯಲ್ಲಿ ಅಡಗಿರುವ ಪಿಶಾಚಿಗೆ ಬಂಧನ ಹಾಕಿ ನಾನು ಕಾಶಿಗೆ ಕಳುಹಿಸುತ್ತಿದ್ದೇನೆ. ನಾಳೆಯಿಂದ ಇವಳು ಮೊದಲಿನಂತೆ ಸಾಮಾನ್ಯವಾಗುತ್ತಾಳೆ. ನಾನಾದರೂ ಈ ಹಣದಿಂದ ಏನು ಮಾಡುತ್ತೇನೆ ಗೊತ್ತಿದೆಯೇ? ಅರೇ! ಬ್ರಾಹ್ಮಣ ಭೋಜನ ಮಾಡಿಸಿದರೆ, ಈ ಪಿಶಾಚಿಗಳು ತೃಪ್ತರಾಗುತ್ತಾರೆ ಮತ್ತು ನಂತರ ಅದು ತೊಂದರೆ ಕೊಡುವದಿಲ್ಲ. ಅದಕ್ಕಾಗಿಯೇ ಬ್ರಾಹ್ಮಣ ಭೋಜನ ಮಾಡಿಸುತ್ತೇನೆ!’ ಎಂದು ಆತನಿಗೆ ಹೇಳಿದರು. ಮರುದಿನದಿಂದ ಆ ಹೆಂಗಸು, ನಿಜವಾಗಿಯೂ ಸಂಪೂರ್ಣ ಸಹಜಳಾದಳು. ತನ್ನಿಂದ ಬೇರೆಯವರಿಗೆ ಬಹಳ ತೊಂದರೆ ಆಯಿತೆಂದು ಅವಳಿಗೆ ಬೇಸರವಾಯಿತು. ಸ್ವಾಮಿಗಳಿಂದಲೂ ಅವಳು ಕ್ಷಮಾಯಾಚನೆ ಮಾಡಿದಳು.

ಕೆಲವೇ ದಿನಗಳಲ್ಲಿ ಅವಳ ಯಜಮಾನನು ವರದಪುರಕ್ಕೆ ೨೦೦೦ ರೂಪಾಯಿ ಕಳುಹಿಸಿದನು. ಅವರ ಕುಟುಂಬದ ಎಲ್ಲರಿಗೂ ಸ್ವಾಮಿಗಳ ಮೇಲೆ ಭಕ್ತಿ – ಶ್ರದ್ಧೆ ಉತ್ಪನ್ನವಾಯಿತು. ಇಂದಿಗೂ ಅವರೆಲ್ಲರಿಗೆ ಸ್ವಾಮಿಗಳ ಮೇಲೆ ಅದೇ ಪ್ರೀತಿ ಸಲುಗೆ ಇದೆ. ಆ ಮಹಿಳೆಯೀಗ ತನ್ನ ಸಂಸಾರವನ್ನು ಉತ್ತಮವಾಗಿ ನಿಭಾಯಿಸುತ್ತಿದ್ದು, ಈಗ ಅವಳಿಗೊಬ್ಬ ಮಗನೂ ಇದ್ದಾನೆ ಮತ್ತು ಅವನ ಹೆಸರು ‘ಶ್ರೀಧರ’ ಎಂದೇ ಇಟ್ಟಿದ್ದಾರೆ.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಫಾಲ್ಗುಣ ೧೯೦೩, ಇಸವಿ ಸನ ೧೯೮೧, ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img