Memories

54. ತಾಯಿಯ ಸೊಂಟದ ಮೇಲಿನ ಬೊಕ್ಕೆ, ಅಸಾಧ್ಯ ನೋವು ಸ್ವಾಮಿಗಳ ಕೃಪೆಯಿಂದ ಗುಣವಾಯಿತು

(ನಿರೂಪಣೆ : ಶ್ರೀಧರಭಕ್ತ ರಾ. ಗೋ. ವೈಜಾಪುರಕರ)

ಶ್ರೀಸದ್ಗುರುಮಾತೆಯ ವಾಸ್ತವ್ಯ ವಾರಣಾಸಿಯಲ್ಲಿಯ ‘ಶ್ರೀಧರ ಸ್ಫೂರ್ತಿ ನಿವಾಸ’ ದಲ್ಲಿದ್ದಾಗಿನ ಒಂದು ನೆನಪಾಗಿದೆ.
ನಾವು ಇರುತ್ತಿದ್ದ ಮನೆಯ ಕೊನೆಯ ಪಾರ್ಶ್ವದಲ್ಲಿ ಒಂದು ಸಣ್ಣ ಕೋಣೆಯಿದೆ. ಅಲ್ಲಿ ಕೇವಲ ಮಣ್ಣು ಇಟ್ಟದ್ದಿರುತ್ತದೆ. ಒಂದು ದಿನ ನನ್ನ ಮಾತೋಶ್ರೀ ಶೌಚಕರ್ಮವಾದ ಮೇಲೆ ಕೈ ಸ್ವಚ್ಛಗೊಳಿಸಲು, ಮಣ್ಣು ತೆಗೆದುಕೊಳ್ಳಲು ಎಂದಿನಂತೆ ಆ ಕೋಣೆಯೊಳಗೆ ಹೋದರು. ಆ ಕೋಣೆ ಹೊಕ್ಕುತ್ತಿದ್ದಂತೆಯೇ ಯಾರೋ ನೈಜ ಪುರುಷನೇ ಅವರ ಕೈಹಿಡಿದು ಒಳಗಡೆ ಎಳೆಯುತ್ತಿದ್ದಂತೆ ಕಾಣಲು, ನನ್ನ ತಾಯಿಯವರು ಸಿಟ್ಟುಗೊಂಡು, ‘ನನ್ನ ಪತಿ ಇರುವಾಗ ನನ್ನ ಕೈಹಿಡಿಯುವ ಅಧಿಕಾರವೇನೇನೂ ನಿನಗೆ ಇಲ್ಲ. ನೀನು ಯಾರು?’, ಎಂದು ಹೇಳುತ್ತ, ಪ್ರಯತ್ನಪಟ್ಟು ಅವನ ಕೈಯಿಂದ ತನ್ನ ಕೈ ಬಿಡಿಸಿಕೊಂಡು ಓಡುತ್ತ ಮನೆಯೊಳಗೆ ಬಂದರು. ಮನೆಗೆ ಬಂದಂತೆಯೇ ಅವರು ಎಚ್ಚರ ತಪ್ಪಿ, ನಿಶ್ಚೇಶ್ಟಿತರಾಗಿ ಬಿದ್ದುಬಿಟ್ಟರು ಮತ್ತು ನಂತರ, ನಡು ನಡುವೆ ‘ನನ್ನ ಸೊಂಟ ನೋಯುತ್ತಿದೆ’, ಎಂದು ಹೇಳುತ್ತಾ ಬಿಕ್ಕುತ್ತಿದಳು. ನನ್ನ ಅಕ್ಕ ಸೊಂಟ ಒತ್ತಲು ಹೋದಾಗ, ತಾಯಿಯ ಸೊಂಟದ ಮೇಲೆ ದೊಡ್ಡ ಬೊಕ್ಕೆ ಎದ್ದಿದ್ದು ನೋಡಿ ಅವಳು ಹೆದರಿದಳು ಮತ್ತು ಮನೆಯಲ್ಲಿದ್ದ ಎಲ್ಲರಿಗೂ ಆಶ್ಚರ್ಯವಾಯಿತು. ಆಗ ರಾತ್ರಿಯ ಹತ್ತು ಗಂಟೆಯಾಗಿತ್ತು. ಇದೆಲ್ಲ ವಿಚಿತ್ರ ಘಟನೆಗಳನ್ನು ನೋಡಿದ ನನ್ನ ತಂದೆ ಹೆದರುತ್ತಲೇ, ತಕ್ಷಣ ಸ್ವಾಮಿಗಳ ಹತ್ತಿರ ಹೋದರು. ಸ್ವಾಮಿಗಳು ಆಗಮಾತ್ರ ತಮ್ಮ ಕೋಣೆಗೆ ಹೋಗಿದ್ದರು. ಸ್ವಾಮಿಗಳು ನನ್ನ ತಂದೆಯ ಕೂಗು ಕೇಳಿದಾಕ್ಷಣ ಸಾವಿತ್ರಿ ಮಾತಾಜೀಗೆ, ‘ಬಾಗಿಲು ತೆಗೆ, ವೈಜಾಪೂರಕರನ ಮೇಲೆ ದೊಡ್ಡ ಸಂಕಟ ಬಂದಿದೆ’, ಎಂದು ಅಪ್ಪಣೆ ಮಾಡಿದರು. ಅದರಂತೆ, ಮಾತಾಜಿಯವರು ಬಾಗಿಲು ತೆರೆದರು. ನನ್ನ ತಂದೆ ಸ್ವಾಮಿಗಳ ಕೋಣೆಯೊಳಗೆ ಸೇರಿದೊಡನೆಯೇ, ಸ್ವಾಮಿಗಳು,’ಏನು ಮಗಾ! ಇಂದು ನಿನ್ನ ಮೇಲೆ ಏನು ಸಂಕಟ ಬಂದಿದೆ?’ ಎಂದು ಪ್ರಶ್ನಿಸಿದರು. ನನ್ನ ತಂದೆ ಇಲ್ಲಿಯವರೆಗೆ ನಡೆದ ಎಲ್ಲಾ ವಿಷಯಗಳನ್ನು ಸವಿಸ್ತರವಾಗಿ ವಿವರಿಸಿದರು. ಅದನ್ನು ಕೇಳಿದ ಸ್ವಾಮಿಗಳು, ‘ಒಳ್ಳೇದು! ಈ ವಿಭೂತಿ ತೆಗೆದುಕೋ ಮತ್ತು ಅವಳ ಮೈಗೆ ಹಚ್ಚು. ಪುನಃ ನಾಳೆ ಬೆಳಿಗ್ಗೆ ತಪ್ಪದೇ ನನ್ನ ಭೆಟ್ಟಿಯಾಗು’, ಎಂದು ಹೇಳಿ, ವಿಭೂತಿಯನ್ನು ನನ್ನ ತಂದೆಯ ಕೈಯಲ್ಲಿ ಕೊಟ್ಟರು. ಮನೆಗೆ ಬಂದು ಆ ವಿಭೂತಿ ಹಚ್ಚಿದೊಡನೆಯೇ ನನ್ನ ತಾಯಿ ಪುನಃ ಎಚ್ಚತ್ತು ತನಗೆ ನಡೆದ ಘಟನೆಯನ್ನು ನಮಗೆ ಸಂಪೂರ್ಣ ಹೇಳಿದಳು. ಮರುದಿನ ಬೆಳಿಗ್ಗೆ, ಪ್ರತಿಯೊಬ್ಬರೂ ತಮ್ಮ ತಮ್ಮ ಕೆಲಸಕ್ಕೆ ತೊಡಗಿದರು. ಅಡಿಗೆಯ ತಯಾರಿಯೂ ನಡೆದಿತ್ತು. ಬೆಳಿಗ್ಗೆ ಸ್ವಾಮಿಗಳು ಕರೆದಿದ್ದು ಎಲ್ಲರೂ ಮರೆತೇ ಬಿಟ್ಟಿದ್ದರು. ಸುಮಾರು ಹತ್ತು ಗಂಟೆಯ ಹೊತ್ತಿಗೆ ನನ್ನ ತಂದೆಗೆ, ಒಮ್ಮೆಲೇ ಆ ವಿಷಯದ ನೆನಪು ಆಗಿ, ತಕ್ಷಣ ಸ್ವಾಮಿಗಳ ಇದ್ದಲ್ಲಿಗೆ ಹೊರಟರು. ಸ್ವಾಮಿಗಳ ಹತ್ತಿರ ಬಂದ ಕೂಡಲೇ ಅವರಿಗೆ ಸ್ವಾಮಿಗಳು ಮುಂದೆ ಏನೇನು ಮಾಡಬೇಕೆಂಬ ಬಗ್ಗೆ ಪೂರ್ಣ ಕಲ್ಪನೆ ಕೊಟ್ಟರು. ‘ಮಗಾ! ಈ ನಿನ್ನ ಮನೆ ಅಂದರೆ ಒಂದು ಪುರಾತನ ಮಠವಾಗಿದ್ದು, ಬಹಳ ವರ್ಷಗಳ ಹಿಂದೆ ಅಲ್ಲಿ ಒಬ್ಬ ಸನ್ಯಾಸಿ ಸಮಾಧಿಸ್ಥನಾಗಿದ್ದು, ಆತನ ಅತೃಪ್ತ ಆತ್ಮ ಇಂದೂ ಆ ಮನೆಯಲ್ಲಿ ತಿರುಗುತ್ತಿರುತ್ತದೆ. ಆದ್ದರಿಂದ ಆ ಮನೆಯಲ್ಲಿ ಯಾರೂ ಹೆಚ್ಚು ದಿನ ಜೀವಂತವಿರಲಿಕ್ಕೆ ಆಗುವದಿಲ್ಲ. ಆದುದರಿಂದ ನೀನು ಇಂದು ಮಧ್ಯಾಹ್ನ ಹನ್ನೆರಡು ಗಂಟೆಯ ಸುಮಾರಿಗೆ ನಾರಾಯಣ ಬಲಿ ಮಾಡಲೇ ಬೇಕು. ಹಣವಿಲ್ಲದಿದ್ದರೆ ನಾನು ಕೊಡುತ್ತೇನೆ. ಆದರೆ ಈ ಕಾರ್ಯ ಯಾವುದೇ ಪರಿಸ್ಥಿತಿಯಲ್ಲೂ ಆಗುವದು ಆವಶ್ಯಕವಾಗಿದೆ’, ಎಂದು ಸ್ವಾಮಿಗಳು ಹೇಳಿದರು.

ನನ್ನ ತಂದೆಯವರು ಮನೆಗೆ ಬಂದು, ಸ್ವಾಮಿಗಳ ಆಜ್ಞೆ ನಮಗೆಲ್ಲಾ ಹೇಳಿದರು ಮತ್ತು
ನಾವೆಲ್ಲಾ ಕಾರ್ಯದ ತಯಾರಿಗೆ ತೊಡಗಿದೆವು. ತಂದೆಯವರು ಬೇಂಕಿನಿಂದ ಹಣ ತಂದು ಎಲ್ಲ ವ್ಯವಸ್ಥೆ ಪ್ರಾರಂಭವಾಯಿತು. ಒಟ್ಟಿನಮೇಲೆ, ಇಪ್ಪತ್ತೊಂದು ಬ್ರಾಹ್ಮಣರಿಗೆ, ಸುವಾಸಿನಿಯರಿಗೆ, ವಟುಗಳಿಗೆ ಮತ್ತು ಕುಮಾರಿಯರಿಗೆ ಯಥಾವಿಧಿ ಅನ್ನಸಂತರ್ಪಣೆ ಆಯಿತು. ಆ ದಿನ ಒಂದೂವರೆ ಮಣ ಹಾಲಿನ ಪಾಯಸ ಬೇಕಾಯಿತು. ಅಡಿಗೆ ಆಚಾರ್ಯನು, ‘ಇದು ಸ್ವಾಮಿಗಳ ಕಾರ್ಯವೇ ಇದೆ’, ಎಂದುಕೊಂಡು ಅಡಿಗೆ ಕೆಲಸದ ಹಣ ತೆಗೆದುಕೊಳ್ಳಲಿಲ್ಲ. ಒಟ್ಟಿನಮೇಲೆ, ಎಲ್ಲ ವಿಧಿ, ಹೋಮ – ಹವನಗಳೆಲ್ಲಾ ಶಾಸ್ತ್ರೋಕ್ತವಾಗಿ ಸಂಪನ್ನವಾಯಿತು. ಹೋಮ ಮುಗಿದ ಕೂಡಲೇ ತಾಯಿಯ ಸೊಂಟದ ಮೇಲಿನ ಬೊಕ್ಕೆ ತಾನಾಗಿಯೇ ಇಲ್ಲವಾಯಿತು ಮತ್ತು ಅವಳು ವಿನಾಯಾಸ ಎದ್ದು ತಿರುಗಹತ್ತಿದಳು. ಇದು ಸದ್ಗುರುಮಾಯಿಯ ಕೃಪೆಯೇ ಅಲ್ಲವೇ?

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಅನುಭಾಮೃತ’ದಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img