Memories

55. ಸ್ವಾಮಿಗಳು ಉರಿಯುತ್ತಿದ್ದ ಮನೆಯಲ್ಲಿದ್ದ ತೊಟ್ಟಿಲು ಶಿಶುವನ್ನು ರಕ್ಷಿಸಿದರು.

(ನಿರೂಪಣೆ : ಶ್ರೀಧರಭಕ್ತ ಶ್ರೀ ರಘುವೀರ ಘಾಣೇಕರ, ಪುಣೆ)

ತಮಿಳನಾಡುವಿನಲ್ಲಿರುವ ಕೋಯಿಂಬತೂರ ಪಟ್ಟಣದಲ್ಲಾದ ಘಟನೆಯಿದು. ಅಲ್ಲಿ ಶ್ರೀ ಪ್ರಭು ಎಂಬ ಹೆಸರಿನ ಒಬ್ಬ ಲಕ್ಷಾಧೀಶ ಸಾವುಕಾರರಿದ್ದರು. ಒಂದು ದಿನ ಅವರ ದೊಡ್ಡ ಮನೆಗೆ ಬೆಂಕಿ ಬಿತ್ತು. ಬೆಂಕಿ ಬಿದ್ದಂತೆಯೇ ಮನೆಯಲ್ಲಿದ್ದ ಎಲ್ಲರೂ, ಗಡಿಬಿಡಿಯಿಂದ ಮನೆಯ ಹೊರಗೆ ಬಿದ್ದರು. ಆದರೆ ಅವರ ಮನೆಯೊಳಗೆ ಒಂದು ಸಣ್ಣ ಶಿಶು ತೊಟ್ಟಿಲಲ್ಲಿ ಮಲಗಿತ್ತು. ಆ ಬೆಂಕಿಯ ಅಪಾಯದಿಂದ ಹೊರ ಬೀಳುವ ಗಡಿಬಿಡಿಯಲ್ಲಿ ಆ ಶಿಶುವನ್ನು ಎತ್ತಿಕೊಂಡು ಬರುವದು ಯಾರಿಗೂ ನೆನಪಾಗಲಿಲ್ಲ. ಬೆಂಕಿಯ ಪ್ರಕೋಪ ಹೆಚ್ಚುತ್ತಲೇ ಇತ್ತು. ಇದರಿಂದ ತಮ್ಮ ಮಗುವನ್ನು ರಕ್ಷಿಸುವದು ತಮ್ಮಿಂದ ಅಶಕ್ಯವೆಂಬ ತೀವ್ರ ದುಃಖದಿಂದ, ಅವರು ಶ್ರೀ ಸದ್ಗುರು ಸ್ವಾಮಿಗಳಿಗೆ, ‘ನಮ್ಮ ಶಿಶುವಿನ ರಕ್ಷಣೆ ಮಾಡಿ’, ಎಂದು ದೀನರಾಗಿ ಪ್ರಾರ್ಥಿಸಿಕೊಂಡರು. ಅದೇನಾಶ್ಚರ್ಯ? ಬೆಂಕಿ ನಂದಿಸಿದ ಮೇಲೆ ಆ ಶಿಶುವಿಗೆ ಸ್ವಲ್ಪವೂ ಅಪಾಯವಾಗದೇ ಜೀವಂತವಿದ್ದದ್ದು ಕಂಡುಬಂತು ಮತ್ತು ಆ ತಂದೆ ತಾಯಿಗಳಿಗೆ ಅಪಾರ ಆನಂದವಾಯಿತು. ಅವರು ತಮ್ಮ ಮನಸ್ಸಿನಲ್ಲಿಯೇ ಆ ಸಮಯದಲ್ಲಿ ಹೇಳಿಕೊಂಡ ಹರಕೆ ತೀರಿಸಲು, ತಮ್ಮ ಮಗುವಿನೊಂದಿಗೆ ವರದಪುರಕ್ಕೆ ಬಂದರು. ಆ ಸಮಯದಲ್ಲಿ ಸ್ವಾಮಿಗಳ ಏಕಾಂತ ಮೌನವಿತ್ತು. ಆದುದರಿಂದ ದರ್ಶನವಾಗುವದು ಶಕ್ಯವಿದ್ದಿಲ್ಲ. ಆಗ ಅವರು, ಸ್ವಾಮಿಗಳ ಸೇವೆಯಲ್ಲಿದ್ದ ಸೇವಕಶಿಷ್ಯರ ಹತ್ತಿರ ಒಂದು ಹರಿವಾಣದಲ್ಲಿ ಅರವತ್ತು ಸಾವಿರ ರೂಪಾಯಿ ಮತ್ತು ತಮ್ಮ ವಿನಂತಿ ಕಳುಹಿಸಿದರು. ಅವರ ಮನಸ್ಸಿನಲ್ಲಿ ಸ್ವಾಮಿಗಳ ಚರಣಗಳಲ್ಲಿ ಒಂದು ಲಕ್ಷ ರೂಪಾಯಿ ಅರ್ಪಣೆ ಮಾಡುವ ವಿಚಾರವಿತ್ತು. ಆದರೆ, ಬೆಂಕಿಯಿಂದಾದ ನಷ್ಟದಿಂದ ಅದು ಶಕ್ಯವಾಗದ್ದರಿಂದ, ‘ಕೈಯಲ್ಲೀಗ ತಂದಿದ್ದು ಸ್ವಾಮಿಗಳ ಸೇವೆಗೆ ಅರ್ಪಣೆಯಾಗಲಿ’, ಎಂದು ವಿನಂತಿ ಮಾಡಿಕೊಂಡರು.

ಸೇವಕಶಿಷ್ಯರು, ಆ ಹರಿವಾಣವನ್ನು ಸ್ವಾಮಿಗಳ ಮುಂದಿಟ್ಟು, ಪ್ರಭು ಪತಿ ಪತ್ನಿಯರ ವಿನಂತಿ ಮತ್ತು ಪ್ರಾರ್ಥನೆಯನ್ನು ನಿವೇದಿಸಿದರು. ಸ್ವಾಮಿಗಳು ಆ ಪ್ರಭು ದಂಪತಿಗಳಿಗೆ ಆಶೀರ್ವಾದ ಮಾಡಿ, ‘ಮಕ್ಕಳೇ! ನಾನು ನಿಮ್ಮ ಮೇಲೆ ಸಂತುಷ್ಟನಿದ್ದೇನೆ. ನಿಮ್ಮ ಇಚ್ಛೆ ನನಗೆ ಒಂದು ಲಕ್ಷ ರೂಪಾಯಿ ಕೊಡಬೇಕೆಂದಿದೆಯಲ್ಲಾ! ಹಾಗಾದರೆ, ನಿಮ್ಮ ಒಂದು ಲಕ್ಷ ಮತ್ತು ನನ್ನ ಒಂದು ಸಾವಿರ, ಹೀಗೆ ಒಂದು ಲಕ್ಷ ಒಂದು ಸಾವಿರ ತುಳಸೀಪತ್ರವನ್ನು ನನಗೆ ಏರಿಸಿರಿ, ಅಂದರೆ ನನಗೆ ಎಲ್ಲವೂ ಮುಟ್ಟಿತು’, ಎಂದು ಅಪ್ಪಣೆ ಕೊಟ್ಟರು.

ಸ್ವಾಮಿಗಳು ಅರವತ್ತು ಸಾವಿರ ರೂಪಾಯಿಯಿದ್ದ ಆ ಹರಿವಾಣವನ್ನು ಆ ದಂಪತಿಗಳಿಗೆ ಪ್ರಸಾದವೆಂದು ತಿರುಗಿ ಕೊಟ್ಟರು ಮತ್ತು ‘ನಾನು ಸಂತುಷ್ಟನಾದೆ’, ಎಂದು ಹೇಳಿ ಆಶೀರ್ವಾದ ತಿಳಿಸಿದರು.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಅನುಭಾಮೃತ’ದಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img