Memories

57. ಸೌಸಾವಿತ್ರಿ ಅಕ್ಕನಿಗೆ ಮರುಜೀವನ ದಾನ

(ನಿರೂಪಣೆ : ಅನಾಮಧೇಯ ಶ್ರೀಧರಭಕ್ತ)

ವಾರಣಾಸಿಯಲ್ಲಿಯ ಗುರುಭಕ್ತ ಸುಬ್ರಾಯ ಭಾಗವತರು ಹೇಳಿದ ಸ್ವಂತ ಅನುಭವ ತುಂಬಾ ರೋಮಾಂಚಕಾರಿ ಮತ್ತು
ಗುರುಮಾಯಿಯ ದಿವ್ಯ ಸಾಮರ್ಥ್ಯದ ದರ್ಶಕವಾಗಿದೆ.

ಸ್ವಾಮಿಗಳ ಚಾತುರ್ಮಾಸ ವಾರಣಾಸಿಯ ಗಂಗಾಮಹಲಿನ ಮೇಲಿನ ಮಾಳಿಗೆಯಲ್ಲಿತ್ತು. ಒಂದು ದಿನ ಶ್ರೀ ಭಾಗವತರು ತಮ್ಮ ವ್ಯವಸಾಯ ಮುಗಿಸಿ, ಮಧ್ಯಾಹ್ನದ ವೇಳೆ ಮನೆಗೆ ತಿರುಗಿ ಬಂದಿರುವಾಗ, ಅವರಿಗೆ ಚಪ್ಪಾಳೆ ತಟ್ಟಿದ ಶಬ್ದ ಕೇಳಿಬಂತು. ಅವರು ಎಲ್ಲ ಕಡೆ ನೋಡಿದಾಗ ಅವರಿಗೆ ಗಂಗಾಮಹಲಿನ ಮೇಲಿನ ಮಾಳಿಗೆಯಿಂದ ಸ್ವಾಮಿಗಳು ಚಪ್ಪಾಳೆ ತಟ್ಟುತ್ತಿದ್ದದ್ದು ಕಾಣಿಸಿತು. ಅವರು ಮೇಲೆ ನೋಡಿದಾಗ ಸ್ವಾಮಿಗಳು, ‘ಇನ್ನೂ ಫಲಾಹಾರ ಬಂದಿಲ್ಲ. ನಿನ್ನ ಪತ್ನಿ ಎಲ್ಲಿದ್ದಾಳೆ?’, ಎಂದು ಕೇಳಲು, ಭಾಗವತರು ಎಲ್ಲಾ ಕಡೆಗೂ ಅವಳನ್ನು ಹುಡುಕಿದರೂ ಎಲ್ಲೂ ಕಾಣಸಿಗಲಿಲ್ಲ. ಆಗ ಅವರು ಸ್ವಾಮಿಗಳಿಗೆ,’ಅವಳೆಲ್ಲೂ ಕಾಣುತ್ತಿಲ್ಲ’, ಎಂದು ಹೇಳಿದರು. ಅದಕ್ಕೆ ಸ್ವಾಮಿಗಳು, ‘ಇನ್ನೂ ಹುಡುಕು’, ಎಂದು ಕೈಸನ್ನೆ ಮಾಡಿ ಹೇಳಿದರು. ಆಗ ಗಂಗಾಮಹಲಿನ ಒಂದು ಕೋಣೆಯ ಬಾಗಿಲು ಒಳಗಿನಿಂದ ಬಂದಾಗಿದ್ದದ್ದು ಕಂಡುಬಂತು. ಬಹಳ ಪ್ರಯತ್ನ ಮಾಡಿದರೂ ಆ ಬಾಗಿಲನ್ನು ತೆಗೆಯಲಾಗಲಿಲ್ಲ. ಆಗ ಸ್ವಾಮಿಗಳ, ‘ಬಾಗಿಲು ಒಡೆ’, ಎಂದು ಕೈಸನ್ನೆಯಿಂದಲೇ ತೋರಿಸಿದರು. ಅಂತೂ ಬಹಳ ಪ್ರಯತ್ನದ ಕೊನೆಗೆ ಆ ಬಾಗಿಲು ತೆಗೆದು ನೋಡಿದರೆ, ಒಳಗೆ ಸೌ. ಸಾವಿತ್ರಿ ಅಕ್ಕಾ ಮರಣಾಸನ್ನ ಸ್ಥಿತಿಯಲ್ಲಿ ಬಿದ್ದಿರುವದು ಕಂಡುಬಂತು. ಶ್ರೀ ಭಾಗವತರು ಗಾಭರಿಗೊಂಡು ಒಳಗೆ ಹೋಗಿ ಅವಳ ನಾಡಿ, ಶ್ವಾಸ ನಡೆಯುತ್ತಿದೆಯೋ ಎಂದು ನೋಡಲು, ಎರಡೂ ಪೂರ್ಣವಾಗಿ ನಿಂತಿದ್ದು ಮತ್ತು ಶರೀರ ತಣ್ಣಗಾಗಿದ್ದು ಕಂಡುಬಂತು. ಈ ವಿಷಯ ಅವರು ಸ್ವಾಮಿಗಳಿಗೆ ಹೇಳಿದಾಗ, ಸ್ವಾಮಿಗಳು, ‘ಅವಳನ್ನು ಹೊರಗೆ ತೆಗೆದುಕೊಂಡು ಬಾ’, ಎಂದು ಹೇಳಿದರು. ಆ ಕಾಲದಲ್ಲಿ ಸೌ. ಸಾವಿತ್ರಿ ಅಕ್ಕ ದಷ್ಡ – ಪುಷ್ಟರಾಗಿದ್ದರು. ಹಾಗಾಗಿ, ತಮ್ಮ ಸಂಪೂರ್ಣ ಶಕ್ತಿಯನ್ನುಪಯೋಗಿಸಿ, ಭಾಗವತರು ಆಕೆಯನ್ನು ಹೊರಗೆ ಎಳೆದು ತಂದರು. ನಂತರ ಸ್ವಾಮಿಗಳು ಅವಳ ಶರೀರದ ಮೇಲೆ ಕಮಂಡಲದಿಂದ ನೀರಿನ ಧಾರೆ ಸುರಿಯಲು ಪ್ರಾರಂಭಿಸಿದರು. ಈ ಧಾರೆಯನ್ನು ಒಂದು ತಾಸಿಗಿಂತಲೂ ಹೆಚ್ಚು ಕಾಲ ಸುರಿಸಿದರು. ಕೊನೆಗೆ, ಸೌ. ಸಾವಿತ್ರಿ ಅಕ್ಕನ ಶ್ವಾಸ ಪ್ರಾರಂಭವಾಯಿತು ಮತ್ತು ಕೆಲ ಸಮಯದ ನಂತರ ಕಣ್ಣು ತೆರೆದು ಅವಳು ಎದ್ದು ಕುಳಿತಳು.

ಶ್ರೀ ಸದ್ಗುರುಮಾತೆಯ ದಿವ್ಯ ಸಾಮರ್ಥ್ಯದ ಇಂತಹದೇ ಪ್ರಕಾರಗಳ ಅನೇಕ ಅನುಭವಗಳಿವೆ.

|ಸದ್ಗುರು ಭಗವಾನ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯ ಜಯ ಜಯ|

(ಗತಕಾಲದ ‘ಶ್ರೀಧರ ಸಂದೇಶ’ ಸಂಚಿಕೆಯ ಪುಟಗಳಿಂದ)
ಕನ್ನಡಾನುವಾದ‌ : ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ

home-last-sec-img